ಬೆಂಗಳೂರು-ಕರಾವಳಿ-ಗೋವಾಗೆ ವಂದೇ ಭಾರತ್‌ ಕ್ರಾಂತಿ: ಹಾಸನ, ಮಂಗಳೂರು, ಉಡುಪಿ, ಕಾರವಾರ ಮಾರ್ಗವಾಗಿ ಮಡಗಾಂವ್‌ವರೆಗೆ ರೈಲು ವಿಸ್ತರಣೆ

ಬೆಂಗಳೂರುಳ: ರಾಜಧಾನಿ ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಿನ ಪ್ರಯಾಣಿಕರ ಬಹುದಿನಗಳ ಕನಸು ಕೊನೆಗೂ ನನಸಾಗಿದೆ. ಮಡಗಾಂವ್-ಮಂಗಳೂರು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಇದೀಗ ಹಾಸನ, ಮಂಗಳೂರು, ಉಡುಪಿ ಮತ್ತು ಕಾರವಾರ ಮಾರ್ಗವಾಗಿ ಬೆಂಗಳೂರಿನ ಯಶವಂತಪುರ ಹಾಗೂ ಮಡಗಾಂವ್ (ಗೋವಾ) ನಡುವೆ ವಿಸ್ತರಿಸಲಾಗಿದೆ.

ಪ್ರಯಾಣಿಕರ ನಿರಂತರ ಬೇಡಿಕೆ, ಪ್ರವಾಸೋದ್ಯಮ, ಧಾರ್ಮಿಕ ಕ್ಷೇತ್ರಗಳ ಭೇಟಿ, ಶಿಕ್ಷಣ ಹಾಗೂ ವಾಣಿಜ್ಯ ಕ್ಷೇತ್ರದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಈ ವಿಸ್ತರಣೆಗೆ ತಕ್ಷಣವೇ ಅನುಮೋದನೆ ನೀಡಿದ್ದಾರೆ. ಈ ವಿಸ್ತರಿತ ಸೆಮಿ-ಹೈಸ್ಪೀಡ್ ರೈಲು ಸೇವೆಯು ಬದಲಾದ ವೇಳಾಪಟ್ಟಿಯೊಂದಿಗೆ ರೈಲು ಸಂಖ್ಯೆ 26655/26656 ಯಶವಂತಪುರ–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಹಳಿಗಳ ಮೇಲೆ ಓಡಾಡಲಿದೆ.

ಯಶವಂತಪುರ (ಬೆಂಗಳೂರು), ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು, ಉಡುಪಿ, ಕುಂದಾಪುರ, ಬೈಂದೂರು, ಮುರುಡೇಶ್ವರ, ಗೋಕರ್ಣ ರೋಡ್, ಕಾರವಾರ ಮತ್ತು ಮಡಗಾಂವ್ (ಗೋವಾ). ಘಾಟ್ ಪ್ರದೇಶದ ವಿದ್ಯುದ್ದೀಕರಣದ ನಂತರ, ಮಲೆನಾಡು ಹಾಗೂ ಕರಾವಳಿ ತೀರದ ಸುಂದರ ನಿಸರ್ಗದ ಸೌಂದರ್ಯವನ್ನು ಸವಿಯುತ್ತಾ ಪ್ರಯಾಣಿಕರು ರಾಜಧಾನಿಯಿಂದ ಗೋವಾಗೆ ನೇರವಾಗಿ ತಲುಪಬಹುದು.

ಇದನ್ನೂ ಓದಿ: ಕರ್ನಾಟಕ ರೈಲ್ವೆ ಇತಿಹಾಸದಲ್ಲೇ ಸುವರ್ಣ ಅಧ್ಯಾಯ: ಕರಾವಳಿ ಜನರ 23 ವರ್ಷಗಳ ಕನಸು ನನಸು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಡೆಯುತ್ತಿರುವ ಆಧುನಿಕ ರೈಲ್ವೆ ಸಂಪರ್ಕ ಕ್ರಾಂತಿಗೆ ಈ ಯೋಜನೆಯು ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ಬೆಂಗಳೂರು, ಕರಾವಳಿಯ ಪ್ರಮುಖ ಶೈಕ್ಷಣಿಕ ಕೇಂದ್ರಗಳು ಹಾಗೂ ಗೋವಾದ ಪ್ರವಾಸಿ ತಾಣಗಳಿಗೆ ಪ್ರಯಾಣಿಸುವ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಅತ್ಯಂತ ವೇಗದ ಹಾಗೂ ಆರಾಮದಾಯಕ ಪ್ರಯಾಣ ಸಿಗಲಿದೆ.

ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವೆ ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಈ ನೇರ ವಂದೇ ಭಾರತ್ ರೈಲು ಹೊಸ ಚೈತನ್ಯ ನೀಡಲಿದೆ. ಕೇಂದ್ರ ಸರ್ಕಾರದ ಈ ಜನಪರ ಮತ್ತು ಕರ್ನಾಟಕಪರ ನಿರ್ಧಾರಕ್ಕೆ ಕರಾವಳಿ ಹಾಗೂ ಮಲೆನಾಡಿನ ಭಾಗದ ಸಾರ್ವಜನಿಕರು ಮತ್ತು ಪ್ರಯಾಣಿಕರ ಸಂಘಟನೆಗಳು ತೀವ್ರ ಸಂತಸ ವ್ಯಕ್ತಪಡಿಸಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *