ಅಕಾಮಿಗಹರ: ಭಾರತೀಯ ಕ್ರೀಡಾ ಇತಿಹಾಸದಲ್ಲಿ ಬಂಗಾರದ ಅಕ್ಷರಗಳಲ್ಲಿ ಬರೆದಿಡುವಂತಹ ಅದ್ಭುತ ಸಾಧನೆ ರೂಪುಗೊಂಡಿದೆ. ಇಲ್ಲಿ ಶುಕ್ರವಾರ ನಡೆದ ಏಷ್ಯನ್ ಗೇಮ್ಸ್ ಮಹಿಳಾ ಹಾಕಿ ಟೂರ್ನಿಯ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಡಿಫೆಂಡಿಂಗ್ ಚಾಂಪಿಯನ್ ಚೀನಾ ತಂಡವನ್ನು 1-0 ಗೋಲುಗಳಿಂದ ಮಣಿಸಿದ ಭಾರತೀಯ ಮಹಿಳಾ ಹಾಕಿ ತಂಡವು ಐತಿಹಾಸಿಕ ಚಿನ್ನದ ಪದಕವನ್ನು (Gold Medal) ಮುಡಿಗೇರಿಸಿಕೊಂಡಿದೆ.
ಈ ಐತಿಹಾಸಿಕ ಜಯದೊಂದಿಗೆ ಭಾರತೀಯ ಮಹಿಳಾ ಹಾಕಿ ತಂಡವು ಬರಲಿರುವ 2028ರ ಲಾಸ್ ಎಂಜಲಿಸ್ ಒಲಿಂಪಿಕ್ಸ್ (LA 2028 Olympics) ಕ್ರೀಡಾಕೂಟಕ್ಕೆ ನೇರ ಅರ್ಹತೆ (Direct Berth) ಪಡೆದುಕೊಂಡಿದೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್ 2026ರಲ್ಲಿ ಭಾರತಕ್ಕೆ ಐತಿಹಾಸಿಕ ಸಾಧನೆ: ಮಹಿಳೆಯರ ರಿಕರ್ವ್ ಆರ್ಚರಿಯಲ್ಲಿ ದೇಶಕ್ಕೆ ಮೊದಲ ಬಾರಿಗೆ ಚಿನ್ನದ ಪದಕ!
ಲಾಲ್ರೆಮ್ಸಿಯಾಮಿ ಅವರ ‘ಟೋಮಾಹಾಕ್’ ಮ್ಯಾಜಿಕ್ ಗೋಲ್:
ಆರಂಭದಿಂದಲೇ ತೀವ್ರ ರೋಚಕತೆಯಿಂದ ಸಾಗಿದ ಪಂದ್ಯದ 10ನೇ ನಿಮಿಷದಲ್ಲಿ ಭಾರತದ ತಾರಾ ಆಟಗಾರ್ತಿ ಲಾಲ್ರೆಮ್ಸಿಯಾಮಿ ಅವರು ಬಾರಿಸಿದ ಅದ್ಭುತ ರಿವರ್ಸ್-ಹಿಟ್ (‘ಟೋಮಾಹಾಕ್’ – Tomahawk) ಗೋಲು ಭಾರತಕ್ಕೆ ಪ್ರಮುಖ ಮುನ್ನಡೆ ತಂದುಕೊಟ್ಟಿತು. ಈ ಏಕೈಕ ಗೋಲು ಪಂದ್ಯದ ನಿರ್ಣಾಯಕ ಗೋಲಾಗಿ ಹೊರಹೊಮ್ಮಿತು.
ಧೂಳೀಪಟವಾಯ್ತು ಚೀನಾ ಆಕ್ರಮಣ:
ಮೊದಲ ಹಂತದಲ್ಲೇ ಗೋಲು ಗಳಿಸಿದ ನಂತರ, ಪಂದ್ಯದುದ್ದಕ್ಕೂ ಭಾರತದ ರಕ್ಷಣಾ ವಿಭಾಗ (Defence) ಅತ್ಯಂತ ಕಟ್ಟುನಿಟ್ಟಾದ ಆಟ ಪ್ರದರ್ಶಿಸಿತು. ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಚೀನಾ ಪಡೆ ಪಂದ್ಯವನ್ನು ಸಮಬಲಗೊಳಿಸಲು ಸತತ ದಾಳಿ ನಡೆಸಿತು. ಆದರೆ ಭಾರತದ ಅನುಭವಿ ಗೋಲ್‌ಕೀಪರ್ ಸವಿತಾ ಪುನಿಯಾ (Savita Punia) ಅವರು ಚೀನಾದ ಅಪಾಯಕಾರಿ ಪೆನಾಲ್ಟಿ ಸ್ಟ್ರೋಕ್ (Penalty Stroke) ಅನ್ನು ಅತ್ಯಂತ ಅದ್ಭುತವಾಗಿ ತಡೆದು ಭಾರತದ ಗೆಲುವಿನ ರೂವಾರಿಯಾದರು.
44 ವರ್ಷಗಳ ಕಾಯುವಿಕೆಗೆ ಐತಿಹಾಸಿಕ ಅಂತ್ಯ:
ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಇದು ಎರಡನೇ ಚಿನ್ನದ ಪದಕವಾಗಿದೆ. ಮಹಿಳಾ ಹಾಕಿಯನ್ನು ಏಷ್ಯನ್ ಗೇಮ್ಸ್‌ಗೆ ಸೇರಿಸಲಾದ 1982 ರ ನವದೆಹಲಿ ಆವೃತ್ತಿಯಲ್ಲಿ ಭಾರತ ಚೊಚ್ಚಲ ಚಿನ್ನ ಗೆದ್ದಿತ್ತು. ಅದಾಗಿ ಭರ್ತಿ 44 ವರ್ಷಗಳ ನಂತರ ಭಾರತ ಮತ್ತೊಮ್ಮೆ ಏಷ್ಯಾದ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತೀಯ ಪಡೆ 1998 ಮತ್ತು 2018 ರ ಏಷ್ಯನ್ ಗೇಮ್ಸ್ ಫೈನಲ್ ಪ್ರವೇಶಿಸಿ ಅನುಕ್ರಮವಾಗಿ ದಕ್ಷಿಣ ಕೊರಿಯಾ ಮತ್ತು ಜಪಾನ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಚೀನಾವನ್ನು ಮಣಿಸುವ ಮೂಲಕ ಚಿನ್ನಕ್ಕೆ ಮುತ್ತಿಕ್ಕಿದೆ.
ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ವಿಜೇತ ಚೀನಾ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರೆ, ಜಪಾನ್ ತಂಡವು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

