ಬೆಂಗಳೂರು: ಬೆಂಗಳೂರು ನಗರ ಹೊರವಲಯದ ಆನೇಕಲ್ ತಾಲೂಕಿನಲ್ಲಿ ತೀವ್ರ ಶೋಕ ಹಾಗೂ ಅನುಮಾನಕ್ಕೆ ಕಾರಣವಾಗಿರುವ ಘಟನೆಯೊಂದು ನಡೆದಿದೆ. ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ 10 ತಿಂಗಳ ಮಗುವಿಗೆ ವೈದ್ಯರು ಸೂಚಿಸಿದ ಸಿರಪ್ (Syrup) ನೀಡಿದ ಕೆಲವೇ ಗಂಟೆಗಳಲ್ಲಿ ಕಂದಮ್ಮ ದಾರುಣವಾಗಿ ಪ್ರಾಣ ಕಳೆದುಕೊಂಡಿದೆ. ಮುದ್ದಿನ ಮಗುವನ್ನು ಕಳೆದುಕೊಂಡ ಬಿಹಾರ ಮೂಲದ ದಂಪತಿಯ ಆಕ್ರಂದನ ಮುಗಿಲ್ಮುಟ್ಟಿದ್ದು, ವೈದ್ಯರ ನಿರ್ಲಕ್ಷ್ಯ ಹಾಗೂ ಸಿರಪ್‌ನ ಅಡ್ಡಪರಿಣಾಮದಿಂದಲೇ ಮಗು ಮೃತಪಟ್ಟಿದೆ ಎಂದು ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆನೇಕಲ್ ಚಂದಾಪುರದಲ್ಲಿ ನಡೆದಿದ್ದೇನು?:
ಬಿಹಾರ ಮೂಲದ ದೇವೇಂದ್ರ ಕುಮಾರ್ ಹಾಗೂ ಬ್ಯೂಟಿ ಕುಮಾರಿ ದಂಪತಿ ಕೆಲಸದ ನಿಮಿತ್ತ ಬೆಂಗಳೂರಿಗೆ ಆಗಮಿಸಿ ಆನೇಕಲ್ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ಒಂದು ವಾರದಿಂದ 10 ತಿಂಗಳ ಮಗು ಜ್ವರ, ಕೆಮ್ಮು ಮತ್ತು ಕಫದಿಂದ ಬಳಲುತ್ತಿತ್ತು. ಹೀಗಾಗಿ ಪೋಷಕರು ಮಗುವನ್ನು ಚಂದಾಪುರ ಮುಖ್ಯರಸ್ತೆಯಲ್ಲಿರುವ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಗುವನ್ನು ತಪಾಸಣೆ ನಡೆಸಿದ ವೈದ್ಯರು ಆಂಟಿಬಯೋಟಿಕ್ (Antibiotic) ಸೇರಿದಂತೆ ನಾಲ್ಕು ವಿಧದ ಸಿರಪ್‌ಗಳನ್ನು ನೀಡಿ, ದಿನಕ್ಕೆ ಮೂರು ಬಾರಿ 0.6 ml ನಂತೆ ನೀಡುವಂತೆ ತಿಳಿಸಿದ್ದರು. ವೈದ್ಯರು ಸೂಚಿಸಿದಂತೆಯೇ ಪೋಷಕರು ಶುಕ್ರವಾರ ರಾತ್ರಿ ಮನೆಯಲ್ಲಿ ಮಗುವಿಗೆ ಸಿರಪ್ ನೀಡಿದ್ದಾರೆ. ಸಿರಪ್ ಸೇವಿಸಿದ ಕೆಲವೇ ಸಮಯದಲ್ಲಿ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ, ಮಗು ಮಾರ್ಗಮಧ್ಯದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಸೂರ್ಯನಗರ ಠಾಣೆಯಲ್ಲಿ ಕೇಸ್ ದಾಖಲು – ತನಿಖೆ ಆರಂಭ:
ವೈದ್ಯರು ನೀಡಿದ ಸಿರಪ್‌ನ ಅಡ್ಡಪರಿಣಾಮವೇ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿರುವ ತಂದೆ-ತಾಯಿ, ಸೂರ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೂರ್ಯನಗರ ಪೊಲೀಸರು ಆಸ್ಪತ್ರೆಯ ವೈದ್ಯರು, ನೀಡಲಾದ ಔಷಧಿಗಳು ಹಾಗೂ ಮಗುವಿಗೆ ಇತರ ಯಾವುದೇ ಆರೋಗ್ಯ ಸಮಸ್ಯೆಗಳಿತ್ತೇ ಎಂಬ ಕೋನದಲ್ಲಿ ತನಿಖೆ ಆರಂಭಿಸಿದ್ದಾರೆ. ಘಟನೆ ಸಂಬಂಧ ಆಸ್ಪತ್ರೆಯ ಆಡಳಿತ ಮಂಡಳಿಯಾಗಲಿ ಅಥವಾ ವೈದ್ಯರಾಗಲಿ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಸೋಮವಾರ ಕರಾವಳಿಗೆ ಸಿಎಂ ಡಿಕೆ ಶಿವಕುಮಾರ್ ಭೇಟಿ: ಉಚ್ಚಿಲ ಮಹಿಳಾ ದಸರಾ ಹಾಗೂ ಮಂಗಳೂರು ದಸರಾ ಉದ್ಘಾಟಿಸಲಿರುವ ಸಿಎಂ
ಮಕ್ಕಳಿಗೆ ಸಿರಪ್ ನೀಡುವ ಮುನ್ನ ಪೋಷಕರಿಗೆ ಪ್ರಮುಖ ಎಚ್ಚರಿಕೆಗಳು:
ಮಕ್ಕಳಿಗೆ, ವಿಶೇಷವಾಗಿ ಶಿಶುಗಳಿಗೆ ಔಷಧಿ ನೀಡುವಾಗ ಸಣ್ಣ ಲೋಪವೂ ಪ್ರಾಣಕ್ಕೆ ಕಂಟಕವಾಗಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ಆರೋಗ್ಯ ತಜ್ಞರು ನೀಡುವ ಪ್ರಮುಖ ಸಲಹೆಗಳು ಇಲ್ಲಿವೆ.
ವೈದ್ಯರ ಚೀಟಿ ಕಡ್ಡಾಯ: ವೈದ್ಯರ ಅಧಿಕೃತ ಸಲಹೆ/ಚೀಟಿ (Prescription) ಇಲ್ಲದೆ ಮೆಡಿಕಲ್ ಸ್ಟೋರ್‌ಗಳಿಂದ ನೇರವಾಗಿ ಯಾವುದೇ ಸಿರಪ್‌ಗಳನ್ನು ನೀಡಬೇಡಿ.
ಸರಿಯಾದ ಪ್ರಮಾಣ ಬಳಸಿ: ಮನೆಗಳಲ್ಲಿ ಬಳಸುವ ಚಮಚಗಳ ಬದಲಿಗೆ ಔಷಧಿಯೊಂದಿಗೆ ಬರುವ ‘ಅಳತೆ ಮುಚ್ಚಳ’ ಅಥವಾ ‘ಡ್ರಾಪರ್’ ಅನ್ನೇ ಬಳಸಿ.
ಎಕ್ಸ್‌ಪೈರಿ ಡೇಟ್ ಪರಿಶೀಲಿಸಿ: ಔಷಧಿಯ ಅಂತಿಮ ಬಳಕೆಯ ದಿನಾಂಕವನ್ನು ತಪ್ಪದೇ ಗಮನಿಸಿ.
ಔಷಧಿಗಳನ್ನು ಬೆರೆಸಬೇಡಿ: ವೈದ್ಯರು ಸೂಚಿಸದೇ ಎರಡು ಬೇರೆ ಬೇರೆ ಸಿರಪ್‌ಗಳನ್ನು ಒಟ್ಟಿಗೆ ಬೆರೆಸಿ ನೀಡಬಾರದು.
ಅಲರ್ಜಿ ಲಕ್ಷಣ ಕಂಡುಬಂದರೆ: ಸಿರಪ್ ನೀಡಿದ ತಕ್ಷಣ ವಾಂತಿ, ಉಸಿರಾಟದ ತೊಂದರೆ, ಮೈಮೇಲೆ ದದ್ದು ಅಥವಾ ಸುಸ್ತು ಕಂಡುಬಂದರೆ ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಿರಿ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

