Breaking News

ವೇಣೂರು ಅರಣ್ಯ ವ್ಯಾಪ್ತಿಯಲ್ಲಿ ಅಪರೂಪದ ಕಪ್ಪು ಚಿರತೆ ಸೆರೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿರ್ಲಾಲ್ ಗ್ರಾಮದ ಮಣಿಲ ಎಂಬಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಅತ್ಯಂತ ಅಪರೂಪದ ಕಪ್ಪು ಚಿರತೆ (Black Panther/Leopard) ಸಿಕ್ಕಿಬಿದ್ದಿದೆ.

ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಸುಳಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ವೇಣೂರು ಅರಣ್ಯ ವಲಯದ ಅಧಿಕಾರಿಗಳು ಮಣಿಲ ನಿವಾಸಿ ಪದ್ಮನಾಭ ಎಂಬುವರ ಮನೆಯ ಸಮೀಪ ಬೋನು ಅಳವಡಿಸಿದ್ದರು. ಶನಿವಾರ (ಅಕ್ಟೋಬರ್ 10) ತಡರಾತ್ರಿ/ಬೆಳಗಿನ ಜಾವ ಕಪ್ಪು ಚಿರತೆ ಬೋನಿಗೆ ಬಿದ್ದಿದೆ. ಕರಾವಳಿ ಭಾಗದಲ್ಲಿ ಅತ್ಯಂತ ಅಪರೂಪವಾಗಿ ಕಾಣಸಿಗುವ ಕಪ್ಪು ಚಿರತೆಯನ್ನು ವೀಕ್ಷಿಸಲು ನೂರಾರು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದರು.

ಇದನ್ನೂ ಓದಿ: ನಾಡಹಬ್ಬ ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ‘ಕಂಬಳ’ ಹಬ್ಬ!: ಮೀಯಾರಿನಲ್ಲಿ 160 ಕೋಣಗಳ ಆಯ್ಕೆ ಪ್ರಕ್ರಿಯೆ

ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಲು ಸಿದ್ಧತೆ:

ಬೋನಿಗೆ ಬಿದ್ದಿರುವ ಕಪ್ಪು ಚಿರತೆ ಸಂಪೂರ್ಣ ಆರೋಗ್ಯವಾಗಿದೆ ಎಂದು ವೇಣೂರು ವಲಯ ಅರಣ್ಯಾಧಿಕಾರಿ (RFO) ಭರತ್ ಯು.ಜಿ. ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಪಶುವೈದ್ಯರ ತಂಡವು ಚಿರತೆಯ ಆರೋಗ್ಯ ತಪಾಸಣೆ ನಡೆಸಿದ್ದು, ಯಾವುದೇ ಗಾಯಗಳಿಲ್ಲದೆ ಚಿರತೆ ಸಶಕ್ತವಾಗಿದೆ. ಹಿರಿಯ ಅಧಿಕಾರಿಗಳ ಸೂಚನೆಯಂತೆ ಆರೋಗ್ಯ ತಪಾಸಣೆ ಪೂರ್ಣಗೊಂಡ ಬಳಿಕ ಚಿರತೆಯನ್ನು ಸುರಕ್ಷಿತವಾಗಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ (Protected Forest Area) ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ವೇಣೂರು ಅರಣ್ಯ ವಲಯದ ಆಲದಂಗಡಿ ಶಾಖಾ ಉಪ ವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ಗಸ್ತು ಅರಣ್ಯ ರಕ್ಷಕ ಮಂಜುನಾಥ್ ಬಿ.ಎಸ್., ಅರಣ್ಯ ವೀಕ್ಷಕರಾದ ವೆಂಕಪ್ಪ ನಾಯ್ಕ್ ಮತ್ತು ಪೂವಪ್ಪ ನಾಯ್ಕ್ ಹಾಗೂ ಸ್ಥಳೀಯ ಗ್ರಾಮಸ್ಥರು ಸಕ್ರಿಯವಾಗಿ ಭಾಗವಹಿಸಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ