ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಹಾಗೂ ರೋಗನಿರ್ಣಯ ಪ್ರಯೋಗಾಲಯಗಳಲ್ಲಿ (Laboratories) ರೋಗಿಗಳಿಂದ ಔಷಧಗಳ ಹೆಸರಿನಲ್ಲಿ ಅತಿಯಾದ ಹಣ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇನ್ಮುಂದೆ ರಾಜ್ಯದ ಎಲ್ಲಾ ಆಸ್ಪತ್ರೆಗಳು ಮತ್ತು ಲ್ಯಾಬ್‌ಗಳಲ್ಲಿ ಔಷಧಗಳ ಖರೀದಿ ಬೆಲೆ (Purchase Price) ಹಾಗೂ ಮಾರಾಟ ಬೆಲೆ (MRP / Selling Price) ಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಈ ನೂತನ ನಿಯಮವು ಮುಂಬರುವ ನವೆಂಬರ್ 1 ರಿಂದ ಜಾರಿಗೆ ಬರಲಿದ್ದು, ರೋಗಿಗಳಿಗೆ ನೀಡಲಾಗುವ ಬಿಲ್‌ಗಳಲ್ಲಿಯೂ ಔಷಧಿಯ ಕೊಳ್ಳುವ ದರ ಹಾಗೂ ಮಾರಾಟದ ದರ ಸ್ಪಷ್ಟವಾಗಿ ನಮೂದಾಗಿರಬೇಕು ಎಂದು ತಿಳಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಚಿವ ಯು.ಟಿ. ಖಾದರ್ ಅವರು, ಆಸ್ಪತ್ರೆಗಳಲ್ಲಿ ಪಾರದರ್ಶಕತೆಯ ಕೊರತೆಯಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳು ಭಾರಿ ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ನ್ಸರ್, ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಬಳಸುವ ತೀವ್ರ ದುಬಾರಿ ಔಷಧಗಳನ್ನು ಆಸ್ಪತ್ರೆಗಳು ಕಡಿಮೆ ದರಕ್ಕೆ ಖರೀದಿ ಮಾಡಿ, ರೋಗಿಗಳಿಗೆ ಅತಿ ಹೆಚ್ಚಿನ ಎಂಆರ್‌ಪಿ (MRP) ದರದಲ್ಲಿ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
“ಆಸ್ಪತ್ರೆಗಳು ಯಾವ ಬೆಲೆಗೆ ಔಷಧಗಳನ್ನು ಖರೀದಿಸುತ್ತವೆ ಮತ್ತು ರೋಗಿಗಳಿಗೆ ಎಷ್ಟು ಬೆಲೆಗೆ ಮಾರಾಟ ಮಾಡುತ್ತಿವೆ ಎಂಬುದು ಪ್ರತಿಯೊಬ್ಬ ರೋಗಿಗೂ ತಿಳಿಯುವ ಹಕ್ಕಿದೆ. ಈ ಮಾಹಿತಿ ಪ್ರದರ್ಶನದಿಂದ ಚಿಕಿತ್ಸಾ ವೆಚ್ಚದಲ್ಲಿ ಪಾರದರ್ಶಕತೆ ಬರಲಿದ್ದು, ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯ ತಡೆಯಬಹುದು” ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: 10 ತಿಂಗಳ ಮುದ್ದು ಕಂದಮ್ಮ ದಾರುಣ ಸಾವು: ವೈದ್ಯರು ನೀಡಿದ ಸಿರಪ್ ಸೇವಿಸಿ ಮಗು ಸಾವನ್ನಪ್ಪಿತೇ?
ನವೆಂಬರ್ 1 ರ ನಂತರ ರಾಜ್ಯದ ಯಾವುದೇ ಆಸ್ಪತ್ರೆ ಅಥವಾ ಲ್ಯಾಬ್‌ಗಳು ಈ ನಿಯಮವನ್ನು ಉಲ್ಲಂಘಿಸಿ, ರೋಗಿಗಳಿಂದ ಹೆಚ್ಚಿನ ದರ ವಸೂಲಿ ಮಾಡುವುದು ಕಂಡುಬಂದರೆ ಅಂತಹ ಸಂಸ್ಥೆಗಳ ವಿರುದ್ಧ ಶಿಸ್ತುಕ್ರಮ ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಅನಾರೋಗ್ಯದ ನೋವಿನ ಜೊತೆಗೆ ಅತಿಯಾದ ಚಿಕಿತ್ಸಾ ವೆಚ್ಚವು ರೋಗಿಗಳ ಕುಟುಂಬವನ್ನು ಕಂಗಾಲು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರದ ಎಲ್ಲಾ ಪಾಲುದಾರರು ಕೈಜೋಡಿಸಿ ಚಿಕಿತ್ಸೆಯನ್ನು ಜನಸಾಮಾನ್ಯರಿಗೆ ಕೈಗೆಟುಕುವಂತೆ ಮಾಡಬೇಕು ಎಂದು ಸಚಿವರು ಕರೆ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

