ಚೆನ್ನೈ : ತಮಿಳುನಾಡಿನ ತೇಣಿ (Theni) ಉಪ-ಕಾರಾಗೃಹದಿಂದ ತಡರಾತ್ರಿ 17 ರೌಡಿ/ಖೈದಿಗಳು ಸಿನಿಮೀಯ ಮಾದರಿಯಲ್ಲಿ ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಭೀಕರ ಘಟನೆ ನಡೆದಿದೆ. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ತಮಿಳುನಾಡು ಪೊಲೀಸ್ ಇಲಾಖೆ, ವ್ಯಾಪಕ ಶೋಧ ಕಾರ್ಯಾಚರಣೆ (Combing Operations) ನಡೆಸಿದ್ದು, ಪರಾರಿಯಾಗಿದ್ದ 17 ಕೈದಿಗಳ ಪೈಕಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ದಕ್ಷಿಣ ವಲಯದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (IGP) ವಿಜಯೇಂದ್ರ ಬಿದರಿ ಅವರು, ತಪ್ಪಿಸಿಕೊಂಡ ಇತರ 13 ಕೈದಿಗಳ ಪತ್ತೆಗೆ ಬಲೆ ಬೀಸಲಾಗಿದ್ದು, ಗಡಿ ಭಾಗಗಳಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ತೇಣಿ ಉಪ-ಜೈಲಿನಲ್ಲಿ ಬಂಧಿಸಲಾಗಿದ್ದ 17 ಮಂದಿ ವಿಚಾರಣಾಧೀನ ಕೈದಿಗಳು ಸೋಮವಾರ ತಡರಾತ್ರಿ ಜೈಲಿನ ಭದ್ರತಾ ಲೋಪವನ್ನು ಬಳಸಿಕೊಂಡು ಎಸ್ಕೇಪ್ ಆಗಿದ್ದರು. ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ದಕ್ಷಿಣ ವಲಯ ಐಜಿಪಿ ವಿಜಯೇಂದ್ರ ಬಿದರಿ ಅವರ ನೇತೃತ್ವದ ಪೊಲೀಸ್ ಪಡೆ, ಇಡೀ ಜಿಲ್ಲೆಯಾದ್ಯಂತ ಹಾಗೂ ನೆರೆಯ ಜಿಲ್ಲೆಗಳಲ್ಲಿ ಬೃಹತ್ ಕಾಂಬಿಂಗ್ ಕಾರ್ಯಾಚರಣೆ ಆರಂಭಿಸಿತು.
ಇದನ್ನೂ ಓದಿ: ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ: ಜೈಪುರ ಬಳಿ ಬಸ್-ಟ್ರಕ್ ಮುಖಾಮುಖಿ ಡಿಕ್ಕಿ; ಮೂವರು ದಾರುಣ ಸಾವು
ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಕೈದಿಗಳನ್ನು ವಶಕ್ಕೆ ಪಡೆದಿದ್ದು, ಉಳಿದ 13 ಕೈದಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

