ನೂರಾರು ಜೀವರಕ್ಷಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ‘ಯುಎಇ ಜಾಯೆದ್ II’ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

ಅಬುಧಾಬಿ: ಆಗಸದಲ್ಲಿ ಹಾರಾಟ ನಡೆಸುತ್ತಿದ್ದ ಫ್ಲೈದುಬೈ (Flydubai) ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ಹಠಾತ್ ದಾಳಿಯ ಸಂದರ್ಭದಲ್ಲಿ ಅಪ್ರತಿಮ ಧೈರ್ಯ ಮತ್ತು ಸಮಯಪ್ರಜ್ಞೆ ಮೆರೆದು ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಮೂಲದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಹಾಗೂ ಫ್ಲೈದುಬೈ ಸಿಬ್ಬಂದಿಗೆ ಯುಎಇ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ.

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸಿಬ್ಬಂದಿಯ ಕಠಿಣ ಕರ್ತವ್ಯನಿಷ್ಠೆ ಮತ್ತು ಸಾಹಸವನ್ನು ಗುರುತಿಸಿ ಘೋಷಿಸಿದ್ದ ಪ್ರತಿಷ್ಠಿತ ‘ಜಾಯೆದ್ II ಪ್ರಶಸ್ತಿ’ಯನ್ನು (Zayed II Award) ದುಬೈನ ಕ್ರೌನ್ ಪ್ರಿನ್ಸ್, ಉಪ ಪ್ರಧಾನ ಮಂತ್ರಿ ಹಾಗೂ ರಕ್ಷಣಾ ಸಚಿವರಾದ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಅಧಿಕೃತವಾಗಿ ಪ್ರದಾನ ಮಾಡಿದರು.

ಸೆಪ್ಟೆಂಬರ್ 30 ರಂದು ಫ್ಲೈದುಬೈ ವಿಮಾನವು ಆಗಸದಲ್ಲಿ ಹಾರಾಟ ನಡೆಸುತ್ತಿದ್ದಾಗ ದುಷ್ಕರ್ಮಿಯೊಬ್ಬ ಕಾಕ್‌ಪಿಟ್‌ಗೆ ನುಗ್ಗಿ ದಿಢೀರ್ ದಾಳಿ ನಡೆಸಿ ತುರ್ತು ಪರಿಸ್ಥಿತಿ ಸೃಷ್ಟಿಸಿದ್ದನು. ದುಷ್ಕರ್ಮಿಯ ಭೀಕರ ದಾಳಿಯಿಂದಾಗಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವಕ್ಕೊಳಗಾಗಿದ್ದರು. ಆದರೆ ಎದೆಗುಂದದ ಅವರು ವಿಮಾನದ ನಿಯಂತ್ರಣ ಸಾಧಿಸಿ, ತೀವ್ರ ಗಾಯಗಳ ನಡುವೆಯೇ ಕಾಕ್‌ಪಿಟ್‌ನ ಒಳಗಿನ ಲಾಕ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು.

ಬಾಗಿಲು ತೆರೆದ ತಕ್ಷಣವೇ ವಿಮಾನದ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳನುಗ್ಗಿ ದಾಳಿಕೋರನನ್ನು ನಿಯಂತ್ರಣಕ್ಕೆ ತಂದರು. ಒಂದು ವೇಳೆ ಬಾಗಿಲು ತೆರೆಯದಿದ್ದರೆ ವಿಮಾನವು ಭೀಕರ ಅಪಘಾತಕ್ಕೆ ಈಡಾಗುವ ಸಂಭವವಿತ್ತು. ಮಚ್ಚರ್ ಅವರ ಸಾಹಸದಿಂದಾಗಿ ಸಂಭಾವ್ಯ ಭಾರೀ ದುರಂತ ತಪ್ಪಿತ್ತು.

ಯುಎಇ ಅಧ್ಯಕ್ಷರು & ಕ್ರೌನ್ ಪ್ರಿನ್ಸ್‌ನಿಂದ ವಿಶೇಷ ಗೌರವ:

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಹಾಗೂ ಯುಎಇ ಪ್ರಧಾನಿ, ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರ ಸಮ್ಮುಖದಲ್ಲಿ ಸಿಬ್ಬಂದಿಯನ್ನು ಭವ್ಯವಾಗಿ ಸನ್ಮಾನಿಸಲಾಯಿತು. “ಮಾನವ ಜೀವವನ್ನು ರಕ್ಷಿಸುವುದು ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸುವುದು ಯುಎಇಯ ಪ್ರಮುಖ ಆದ್ಯತೆ” ಎಂದು ಯುಎಇ ನಾಯಕರು ಕೊಂಡಾಡಿದರು.

ಇದಕ್ಕೂ ಮುನ್ನ, ಕ್ಯಾಪ್ಟನ್ ಮಚ್ಚರ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅಕ್ಟೋಬರ್ 3 ರಂದು ದುಬೈ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಸ್ವತಃ ಆಸ್ಪತ್ರೆಗೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿ, “ಮಚ್ಚರ್ ಅವರ ಧೈರ್ಯ ಯುಎಇ ವಾಯುಯಾನ ಕ್ಷೇತ್ರದ ಹೆಮ್ಮೆ” ಎಂದು ಬಣ್ಣಿಸಿದ್ದರು.

ಇದನ್ನೂ ಓದಿ: “ಇಸ್ರೇಲ್ ನೆಲಕ್ಕೇ ವಿಮಾನ ಅಪ್ಪಳಿಸುವುದು ನನ್ನ ಗುರಿಯಾಗಿತ್ತು”: ಫ್ಲೈದುಬೈ ದಾಳಿಕೋರ ಸಹ-ಪೈಲಟ್ ಹಮ್ಮಾಮಿ ಭೀಕರ ಸತ್ಯ ಬಾಯಿಬಿಟ್ಟ

ಮೋದಿ, ಟ್ರಂಪ್, ನೆತನ್ಯಾಹು ಜಾಗತಿಕ ನಾಯಕರಿಂದ ಪ್ರಶಂಸೆಯ ಮಹಾಪೂರ:

ಕ್ಯಾಪ್ಟನ್ ಮಚ್ಚರ್ ಅವರನ್ನು “ಭಾರತದ ಹೆಮ್ಮೆಯ ಪುತ್ರ, ಸಂಕಷ್ಟದ ಸಮಯದಲ್ಲಿ ನೂರಾರು ಜೀವ ಉಳಿಸಿದ ರಿಯಲ್ ಹೀರೋ” ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದರೂ ಎದೆಗುಂದದೆ ಕಾಕ್‌ಪಿಟ್ ಬಾಗಿಲು ತೆರೆದು ಎಲ್ಲರನ್ನೂ ರಕ್ಷಿಸಿದ ಭಾರತೀಯ ಕ್ಯಾಪ್ಟನ್‌ನ ಅಪ್ರತಿಮ ಧೈರ್ಯವನ್ನು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. ಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಚ್ಚರ್ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಸ್ರೇಲ್ ಸರ್ಕಾರವು ಅವರಿಗೆ ಅಧಿಕೃತ ‘ನಾಗರಿಕ ಶೌರ್ಯ ಪ್ರಶಸ್ತಿ’ (Civil Bravery Award) ನೀಡುವುದಾಗಿ ಘೋಷಿಸಿದೆ. ಮಚ್ಚರ್ ಸಂಪೂರ್ಣ ಚೇತರಿಸಿಕೊಂಡ ನಂತರ ಈ ಗೌರವ ಪ್ರದಾನ ಮಾಡಲಾಗುವುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ