ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಂಪೂರ್ಣ ಜನವಿರೋಧಿ ಧೋರಣೆ ಅನುಸರಿಸುತ್ತಿದ್ದು, ಗ್ರಾಮೀಣ ಭಾಗದ ಪಂಚಾಯತ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆಯ ಮೂಲಕ ಜನರ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಭಾರತೀಯ ಜನತಾ ಪಾರ್ಟಿ (BJP) ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ “ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಾಂದೋಲನ – ನಮ್ಮ ಹಕ್ಕು ನಮಗೆ ನೀಡಿ” ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಜಂಟಿಯಾಗಿ ಭಾಗವಹಿಸಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಮಂಡಲದ ಅಧ್ಯಕ್ಷರಾದ ರಾಜೇಶ್ ಕೊಟ್ಟಾರಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಶಾಲೆಗೆ ಒಂದೇ ಒಂದು ಕೊಠಡಿ ನಿರ್ಮಿಸಲಾಗದ ಅಸಮರ್ಥ ಸರ್ಕಾರ: ಶಾಸಕ ಡಾ. ವೈ. ಭರತ್ ಶೆಟ್ಟಿ
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಸಾಲು ಸಾಲಾಗಿ ಎತ್ತಿಹಿಡಿದರು. “ಕಾಂಗ್ರೆಸ್ ಸರ್ಕಾರದಲ್ಲಿ ಜನಸಾಮಾನ್ಯರು ಬದುಕುವುದೇ ದುಸ್ತರವಾಗಿದೆ. ನೋಂದಣಿ ಶುಲ್ಕ ಹಾಗೂ ತೆರಿಗೆಗಳನ್ನು ಮೂರ್ನಾಲ್ಕು ಪಟ್ಟು ಹೆಚ್ಚಿಸಲಾಗಿದೆ. ಹುಟ್ಟಿದ ಮಗುವಿನ ಜನನ ಪ್ರಮಾಣಪತ್ರದಿಂದ ಹಿಡಿದು ಮರಣ ಪ್ರಮಾಣಪತ್ರದವರೆಗೂ ಹಣ ವಸೂಲಿ ಮಾಡುವ ದಂದೆ ನಡೆಯುತ್ತಿದೆ.”
“ಕಳೆದ ಮೂರೂವರೆ ವರ್ಷಗಳಲ್ಲಿ ಇಡೀ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗೆ ಒಂದೇ ಒಂದು ಕೊಠಡಿ ನಿರ್ಮಿಸಿಕೊಡಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ವಿವೇಕ ಯೋಜನೆ’ಯಡಿ ಪ್ರತಿಯೊಂದು ಶಾಲೆಗೂ ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಆದರೆ ಇಂದು ಶಾಲಾ-ಅಂಗನವಾಡಿಗಳ ಚೇರ್, ಕಂಪ್ಯೂಟರ್ಗಾಗಿ MRPL, NMPA, MCF ನಂತಹ ಸಂಸ್ಥೆಗಳ CSR ನೆರವನ್ನು ಬೇಡುವ ದುಸ್ಥಿತಿ ಬಂದಿದೆ. ಪೋಲಿಸ್ ಇಲಾಖೆಯಲ್ಲಿ ವರ್ಗಾವಣೆ ದಂದೆ ಮಿತಿಮೀರಿದ್ದು, ಲಂಚ ನೀಡಿ ಬಂದಿರುವ ಅಧಿಕಾರಿಗಳು ಸಾರ್ವಜನಿಕರ ಮೇಲೆ ದರ್ಪ ತೋರುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಸರ್ಕಾರದ ಸುತ್ತಲೂ ಬಕೆಟ್ ಹಿಡಿಯುವವರ ದಂಡೇ ನೆರೆದಿದ್ದು, ಮುಂದಿನ ಚುನಾವಣೆಯಲ್ಲಿ ಜನತೆ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಎಚ್ಚರಿಸಿದರು.
ಇದನ್ನೂ ಓದಿ: ಬ್ಯಾಲೆಟ್ ಪೇಪರ್ನಲ್ಲೇ ಚುನಾವಣೆಯನ್ನು ನಡೆಸಿ ಎಂದು ಹಠ ಹಿಡಿದ ಕಾಂಗ್ರೆಸ್ಗೆ ಹೀನಾಯ ಸೋಲು: ಸೋಲಿಗೆ ಮೂರು ಕಾರಣ
ಪಂಚಾಯಿತಿಗಳು ಅನುದಾನ ಶೂನ್ಯ, ವಾಲ್ಮೀಕಿ ನಿಗಮದ ಹಣ ಲೂಟಿ: MLC ಕಿಶೋರ್ ಕುಮಾರ್ ಪುತ್ತೂರು
ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ ಸರ್ಕಾರದ ಬೊಕ್ಕಸ ಖಾಲಿಯಾಗಿರುವುದನ್ನು ಬಿಚ್ಚಿಟ್ಟರು. “ಗ್ಯಾರಂಟಿಗಳ ಹೆಸರಿನಲ್ಲಿ ಪರಿಶಿಷ್ಟ ಸಮುದಾಯದ ₹46,000 ಕೋಟಿ SCSP ಹಾಗೂ TSP ಅನುದಾನವನ್ನು ದುರ್ಬಳಕೆ ಮಾಡಲಾಗಿದೆ. ವಾಲ್ಮೀಕಿ ನಿಗಮದ ₹187 ಕೋಟಿ ಬಡವರ ಹಣವನ್ನು ಲೂಟಿ ಮಾಡಿರುವ ಈ ಸರ್ಕಾರದಲ್ಲಿ ಖಜಾನೆ ಪೂರ್ಣ ಖಾಲಿಯಾಗಿದೆ.”
“ಗ್ರಾಮ ಪಂಚಾಯಿತಿಗಳಿಗೆ ನೀಡುವ ₹10 ಲಕ್ಷ ಅನುದಾನದಲ್ಲಿ ₹6 ಲಕ್ಷ ಹಣ ವಿದ್ಯುತ್ ಬಿಲ್ಗೇ ಕಡಿತವಾಗುತ್ತಿದ್ದು, ರಸ್ತೆ ಹಾಗೂ ಮೂಲಸೌಕರ್ಯಕ್ಕೆ ನಯಾಪೈಸೆ ಉಳಿಯುತ್ತಿಲ್ಲ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನವೊಂದೇ ಇಂದು ಪಂಚಾಯಿತಿಗಳ ಉಳಿವಿಗೆ ಆಸರೆಯಾಗಿದೆ.”
“ರಾಜ್ಯದ 42 ಇಲಾಖೆಗಳಲ್ಲಿ 2.84 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡುತ್ತಿಲ್ಲ, ‘ಯುವನಿಧಿ’ಯೂ ಸಿಗುತ್ತಿಲ್ಲ. 13 ಸಾವಿರಕ್ಕೂ ಅಧಿಕ ಮನೆಗಳ ಅರ್ಜಿ ಸಲ್ಲಿಕೆಯಾಗಿದ್ದರೂ ಒಂದೇ ಒಂದು ಬಡ ಕುಟುಂಬಕ್ಕೆ ಮನೆ ಮಂಜೂರಾಗಿಲ್ಲ. ವೃದ್ಧಾಪ್ಯ, ವಿಧವಾ ವೇತನಕ್ಕೆ ಕತ್ತರಿ ಹಾಕಲಾಗಿದೆ” ಎಂದು ವಾಗ್ದಾಳಿ ನಡೆಸಿದರು.
ಅಂತಿಮವಾಗಿ, ಗ್ರಾಮ ಪಂಚಾಯತ್ ಮಟ್ಟದಿಂದಲೇ ಈ ಭ್ರಷ್ಟ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸಿ, ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ನಾಯಕರು ಎಚ್ಚರಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

