ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್ ಪ್ರಯಾಣಿಕರಿಗೂ ಶೀಘ್ರವೇ ದರ ಏರಿಕೆ ಬಿಸಿ

ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ ₹8 ಹೆಚ್ಚಳವಾದ ಬೆನ್ನಲ್ಲೇ, ಸಾರ್ವಜನಿಕರಿಗೆ ಕೆಎಸ್‌ಆರ್‌ಟಿಸಿ (KSRTC) ಹಾಗೂ ಬಿಎಂಟಿಸಿ (BMTC) ಸೇರಿದಂತೆ ಸಾರಿಗೆ ಸಂಸ್ಥೆಗಳ ಬಸ್ ಟಿಕೆಟ್ ದರ ಏರಿಕೆಯ ಬಿಸಿಯೂ ತಟ್ಟಲಾರಂಭಿಸಿದೆ. ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬಸ್ ಟಿಕೆಟ್ ದರ ಹೆಚ್ಚಳದ ಕುರಿತು ಸುದೀರ್ಘ ಚರ್ಚೆ ನಡೆದಿದ್ದು, ಅಂತಿಮ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರವನ್ನು ಸಾರಿಗೆ ಇಲಾಖೆಗೆ ವಹಿಸಲಾಗಿದೆ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಾರಿಗೆ ಸಚಿವ ಭೈರತಿ ಸುರೇಶ್, ಶೀಘ್ರದಲ್ಲೇ ಪರಿಷ್ಕೃತ ಬಸ್ ಟಿಕೆಟ್ ದರವನ್ನು ಅಧಿಕೃತವಾಗಿ ಪ್ರಕಟಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ನವೆಂಬರ್ 3ಕ್ಕೆ ಸಾರಿಗೆ ಅಧಿಕಾರಿಗಳ ಹೈಲೆವೆಲ್ ಮೀಟಿಂಗ್:

ಬಸ್ ದರ ಏರಿಕೆಯ ರೂಪುರೇಷೆ ಸಿದ್ಧಪಡಿಸಲು ಸಾರಿಗೆ ಇಲಾಖೆಯು ಸಕಲ ಸಿದ್ಧತೆ ನಡೆಸಿದೆ. “ಬಸ್ ಪ್ರಯಾಣ ದರ ಹೆಚ್ಚಳ ಮಾಡಬೇಕೆಂದು ನಾವು ಈಗಾಗಲೇ ತೀರ್ಮಾನಿಸಿದ್ದೆವು. ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದು, ದರ ಏರಿಕೆ ಸಂಬಂಧ ಸಾರಿಗೆ ಇಲಾಖೆಯ ಹಂತದಲ್ಲೇ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.” ಎಂದು ಸಚಿವರು ಹೇಳಿದ್ದಾರೆ.

“ಈ ಹಿನ್ನೆಲೆಯಲ್ಲಿ ಬರುವ ನವೆಂಬರ್ 3ರಂದು ಸಾರಿಗೆ ಇಲಾಖೆಯ ಮುಖ್ಯ ಕಾರ್ಯದರ್ಶಿ ಹಾಗೂ ನಾಲ್ಕೂ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ವ್ಯವಸ್ಥಾಪಕ ನಿರ್ದೇಶಕರ (MD) ಜೊತೆ ಮಹತ್ವದ ಸಭೆ ನಡೆಸಲಿದ್ದೇನೆ. ಎಷ್ಟು ಶೇಕಡಾ ದರ ಹೆಚ್ಚಳ ಮಾಡಬಹುದು ಎಂಬ ಅಂತಿಮ ತೀರ್ಮಾನವನ್ನು ಅಂದು ಕೈಗೊಳ್ಳಲಾಗುವುದು.” ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಾಲಿನ ದರ ಏರಿಕೆ ಬೆನ್ನಲ್ಲೇ ಕಾಫಿ, ಟೀ, ತಿಂಡಿ ದುಬಾರಿ

ನವೆಂಬರ್ 4ರಂದು ಸಚಿವರಿಂದ ಅಧಿಕೃತ ಸುದ್ದಿಗೋಷ್ಠಿ:

ಸಾರಿಗೆ ನಿಗಮಗಳ ಅಧಿಕಾರಿಗಳ ಜೊತೆ ನವೆಂಬರ್ 3ರಂದು ನಡೆಯಲಿರುವ ಸಭೆಯಲ್ಲಿ ದರ ಏರಿಕೆಯ ಪ್ರಮಾಣವನ್ನು ಅಂತಿಮಗೊಳಿಸಿದ ಬಳಿಕ, ನವೆಂಬರ್ 4ರಂದು ಸಾರಿಗೆ ಸಚಿವ ಭೈರತಿ ಸುರೇಶ್ ಅವರೇ ಸ್ವತಃ ಸುದ್ದಿಗೋಷ್ಠಿ ನಡೆಸಿ ಬಸ್ ಟಿಕೆಟ್ ದರ ಹೆಚ್ಚಳದ ಪೂರ್ಣ ವಿವರಗಳನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ಇಂಧನ ಬೆಲೆ ಏರಿಕೆ, ಬಿಡಿಭಾಗಗಳ ವೆಚ್ಚ ಮತ್ತು ಸಾರಿಗೆ ನಿಗಮಗಳ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಲಾಗುತ್ತಿದ್ದು, ಶಕ್ತಿ ಯೋಜನೆಯ ನಡುವೆಯೂ ದರ ಏರಿಕೆಯು ಪ್ರಯಾಣಿಕರ ಜೇಬಿಗೆ ನೇರ ಹೊರೆಯಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ