ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಸರ್ಕಾರದ ಪರವಾಗಿ ಲೀಟರ್‌ಗೆ ₹8 ಏರಿಕೆ ಮಾಡಿದ ಬೆನ್ನಲ್ಲೇ, ಸಾರ್ವಜನಿಕರಿಗೆ ಹಾಗೂ ಸಮಾನ್ಯ ಗ್ರಾಹಕರಿಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಅಂಗಡಿ ಮಾಲೀಕರು ಮತ್ತು ಚಿಲ್ಲರೆ ಮಾರಾಟಗಾರರು ತಮ್ಮ ಲಾಭದ ಪ್ರಮಾಣವಾಗಿ (Retail Margin) ಲೀಟರ್‌ಗೆ ₹2 ಹಾಗೂ ಅರ್ಧ ಲೀಟರ್‌ಗೆ ₹1 ಹೆಚ್ಚಿಸಲು ತೀರ್ಮಾನಿಸಿದ್ದಾರೆ. ಇದರೊಂದಿಗೆ ನವೆಂಬರ್ 1ರಿಂದ ರಾಜ್ಯದಲ್ಲಿ 1 ಲೀಟರ್ ಹಾಲಿನ ಬೆಲೆ ಒಟ್ಟಾರೆಯಾಗಿ ₹10 ಏರಿಕೆಯಾದಂತಾಗಿದೆ. ಪರಿಷ್ಕೃತ ದರದಂತೆ ಇನ್ಮುಂದೆ ಚಿಲ್ಲರೆ ಅಂಗಡಿಗಳಲ್ಲಿ ಅರ್ಧ ಲೀಟರ್ ಹಾಲಿನ ದರ ₹32ಕ್ಕೆ ಹಾಗೂ ಒಂದು ಲೀಟರ್ ಹಾಲಿನ ದರ ₹64ಕ್ಕೆ ತಲುಪಲಿದೆ.
2023ರಿಂದ ಸತತ 4ನೇ ಬಾರಿಗೆ ಹಾಲಿನ ದರ ಏರಿಕೆ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಂದಿನಿ ಹಾಲಿನ ಬೆಲೆಯನ್ನು ಸತತವಾಗಿ ಏರಿಕೆ ಮಾಡುತ್ತಾ ಬರಲಾಗಿದೆ:
ಆಗಸ್ಟ್ 2023: ಲೀಟರ್‌ಗೆ ₹3 ಏರಿಕೆ.
ಜೂನ್ 2024: ಲೀಟರ್‌ಗೆ ₹2 ಏರಿಕೆ.
ಮಾರ್ಚ್ 2025: ಲೀಟರ್‌ಗೆ ₹2 ಏರಿಕೆ.
ನವೆಂಬರ್ 2026: ಸರ್ಕಾರದ ಕಡೆಯಿಂದ ಲೀಟರ್‌ಗೆ ಬರೋಬ್ಬರಿ ₹8 ಏರಿಕೆ.
ನವೆಂಬರ್ 1ರಿಂದ ಜಾರಿಗೆ ಬರಲಿರುವ ₹8 ಹೆಚ್ಚಳದ ಪೈಕಿ ₹7 ಹಣ ನೇರವಾಗಿ ಹಾಲು ಉತ್ಪಾದಕ ರೈತರಿಗೆ ತಲುಪಲಿದ್ದು, ₹1 ಹಣವನ್ನು ಕೆಎಮ್‌ಎಫ್ (KMF) ಪಡೆಯಲಿದೆ ಎಂದು ಸಚಿವ ಕೃಷ್ಣಬೈರೇಗೌಡ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಅಂಗಡಿದಾರರ ಕಮಿಷನ್ ದರ ಸೇರಿ ಗ್ರಾಹಕರು ಈಗ ಪ್ರತಿ ಲೀಟರ್‌ಗೆ ಹೆಚ್ಚುವರಿಯಾಗಿ ₹10 ತೆರಬೇಕಾದ ಅನಿವಾರ್ಯತೆ ಎದುರಾಗಿದೆ.

