ಉಡುಪಿ: ಮಹಿಳೆಯೊಂದಿಗಿನ ಸಂಬಂಧದ ವಿಚಾರವಾಗಿ ಉಂಟಾದ ವಿವಾದ ಹಾಗೂ ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಯುವಕನನ್ನು ನಾಯರ್ಕುಡಿ ಘಟಕದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಪ್ರದೀಪ್ ಪೂಜಾರಿ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಪ್ರದೀಪ್ ಕಳೆದ ಏಳು ವರ್ಷಗಳಿಂದ ಯುವತಿಯೊಬ್ಬಳೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಆದರೆ ಇತ್ತೀಚೆಗೆ ಯುವತಿ ಆತನನ್ನು ನಿರಾಕರಿಸಿದ್ದಳು. ಈ ವಿಚಾರವಾಗಿ 2025ರಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆತನನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ: ನಂದಿನಿ ಮೊಸರು ದರದಲ್ಲಿ ಬರೋಬ್ಬರಿ 14ರೂ. ಏರಿಕೆ: ಅಂಗಡಿ ಮಾಲೀಕರಿಂದಲೂ ಹೆಚ್ಚಳ
ಅಕ್ಟೋಬರ್ 27ರಂದು ಪ್ರದೀಪ್ ಮತ್ತೆ ಯುವತಿಯ ಮನೆಗೆ ತೆರಳಿ ಗಲಾಟೆ ನಡೆಸಿದ್ದಾನೆ ಎನ್ನಲಾಗಿದ್ದು, ಈ ವೇಳೆ ಮೆಣಸಿನ ಪುಡಿ ಎರಚಲು ಯತ್ನಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಈ ಸಂದರ್ಭದಲ್ಲಿ ಯುವತಿಯ ಕುಟುಂಬಸ್ಥರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಯುವತಿಯ ಕುಟುಂಬಸ್ಥರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೆ, ಪ್ರದೀಪ್ ಕೂಡ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದ ಎನ್ನಲಾಗಿದೆ.
ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರದೀಪ್ ಅವರನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಸ್ಪತ್ರೆಯ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಘಟನೆ ಬೆನ್ನಲ್ಲೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಸ್ಥಳೀಯರು ಉಡುಪಿ ನಗರ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿ, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ಆರೋಪಗಳ ಕುರಿತು ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

