ಬೆಂಗಳೂರು; ರಾಜ್ಯ ರಾಜಕಾರಣದಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಮಹತ್ವದ ‘ಸ್ಟಿಂಗ್ ಆಪರೇಷನ್’ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಸಿಬಿ (CCB) ಕ್ಲೀನ್ ಚಿಟ್ ನೀಡಿದೆ. ಈ ಸ್ಟಿಂಗ್ ಆಪರೇಷನ್ ಒಂದು ‘ಕಟ್ಟುಕಥೆ’ ಎಂದು ಸಿಸಿಬಿ ಮಾಧ್ಯಮ ಪ್ರಕಟಣೆಯ ಮೂಲಕ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಇದರ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ಭಾರಿ ರಾಜಕೀಯ ಬೆಳವಣಿಗೆಗಳು ಜರುಗಿದ್ದು, ಪ್ರಕರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಹಿರಿಯ ನಾಯಕಿ ಕೃಪಾ ಆಳ್ವಾ ಅವರನ್ನು 6 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಸ್ಟಿಂಗ್ ತಂಡವು ಬ್ಲ್ಯಾಕ್ಮೇಲ್ ತಂತ್ರ ಅನುಸರಿಸಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ದೂರುದಾರ ಸಿದ್ದರಾಮಯ್ಯ ಅವರಿಂದ ಹೆಚ್ಚಿನ ಹೇಳಿಕೆ ಪಡೆಯಲು ಸಿಸಿಬಿ ಪೊಲೀಸರು ಚರ್ಚೆ ನಡೆಸಿದ್ದಾರೆ.
ಕೃಪಾ ಆಳ್ವಾ ಉಚ್ಚಾಟನೆ ಹಾಗೂ ಕೆಪಿಸಿಸಿ ನೋಟೀಸ್:
ಸ್ಟಿಂಗ್ ಪ್ರಕರಣದಲ್ಲಿ ಸ್ವಪಕ್ಷದವರ ಕೈವಾಡವಿದೆ ಎಂದು ಸಿದ್ಧರಾಮಯ್ಯ ಅವರ ಪುತ್ರ, ಸಚಿವ ಯತೀಂದ್ರ ಸಿದ್ದರಾಮಯ್ಯ ಬಹಿರಂಗವಾಗಿಯೇ ಆರೋಪಿಸಿದ್ದರು. ಸ್ವತಃ ಸಿದ್ದರಾಮಯ್ಯ ಅವರೇ ಕೃಪಾ ಆಳ್ವಾ ಅವರ ಹೆಸರು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು/ಅಧ್ಯಕ್ಷರ ಸೂಚನೆ ಮೇರೆಗೆ ಕೃಪಾ ಆಳ್ವಾರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಅಮಾನತುಗೊಳಿಸಿ ಕೆಪಿಸಿಸಿ ಆದೇಶ ಹೊರಡಿಸಿದೆ. “ರಾಜ್ಯದಲ್ಲಿ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ನಡೆಸಲಾದ ಈ ಸ್ಟಿಂಗ್ ಆಪರೇಷನ್ನಿಂದ ಪಕ್ಷಕ್ಕೆ ಭಾರಿ ಮುಜುಗರ ಉಂಟಾಗಿದೆ. ಈ ಘಟನೆಯಲ್ಲಿ ನಿಮ್ಮ ಭಾಗಿಯಾಗುವಿಕೆ ಹಾಗೂ ಪಕ್ಷವಿರೋಧಿ ಚಟುವಟಿಕೆ ಕುರಿತು ಕೆಪಿಸಿಸಿಯಿಂದ ಕಾರಣ ಕೇಳಿ ನೋಟೀಸ್ ನೀಡಲಾಗಿತ್ತು. ಆದರೆ ನೀವು ಇದುವರೆಗೂ ನೋಟೀಸ್ಗೆ ಯಾವುದೇ ಉತ್ತರ ನೀಡಿಲ್ಲ. ಹೀಗಾಗಿ ಪಕ್ಷದ ಶಿಸ್ತು ಉಲ್ಲಂಘನೆ ಹಿನ್ನೆಲೆಯಲ್ಲಿ ನಿಮ್ಮನ್ನು 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ,” ಎಂದು ಕೆಪಿಸಿಸಿ ತಿಳಿಸಿದೆ.
ಇದನ್ನೂ ಓದಿ: ‘ಸ್ಟಿಂಗ್ ವಿಡಿಯೋ’ ಪ್ರಕರಣ: ಮಾಜಿ ಸಿಎಂ ಸಿದ್ದರಾಮಯ್ಯಗೆ ಸಿಸಿಬಿಯಿಂದ ‘ಕ್ಲೀನ್ ಚಿಟ್’
ವಿಚಾರಣೆ ಮುಗಿಯುತ್ತಿದ್ದಂತೆ ವಿದೇಶಕ್ಕೆ ಪರಾರಿ?
ಸಿದ್ದರಾಮಯ್ಯ ಅವರು ಕೃಪಾ ಆಳ್ವಾ ಹೆಸರು ಪ್ರಸ್ತಾಪಿಸಿದ ಬೆನ್ನಲ್ಲೇ, ಅಕ್ಟೋಬರ್ 24ರಂದು ಬೆಂಗಳೂರಿನ ಕೇಂದ್ರ ಸೈಬರ್ ಅಪರಾಧ ವಿಭಾಗದ (Central Cyber Crime Police) ಪೊಲೀಸರ ಎದುರು ಅವರು ವಿಚಾರಣೆಗೆ ಹಾಜರಾಗಿದ್ದರು. ಆದರೆ, ವಿಚಾರಣೆ ನಡೆದ ಬೆನ್ನಲ್ಲೇ ಕೃಪಾ ಆಳ್ವಾ ಅವರು ದೇಶ ತೊರೆದು ವಿದೇಶಕ್ಕೆ ಹಾರಿದ್ದಾರೆ ಎಂದು ವರದಿಯಾಗಿದ್ದು, ಹಲವು ಅನುಮಾನ ಹಾಗೂ ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ. ಕಾಂಗ್ರೆಸ್ ಪಕ್ಷದ ನಾಯಕರ ನಡುವಿನ ಹಗ್ಗಜಗ್ಗಾಟ ಹಾಗೂ ಸಿಸಿಬಿ ತನಿಖೆಯ ನಡೆ ಕೃಪಾ ಆಳ್ವಾ ರೂಪದಲ್ಲಿ ಮೊದಲ ವಿಕೆಟ್ ಪತನಕ್ಕೆ ಕಾರಣವಾಗಿದ್ದು, ಪ್ರಕರಣ ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

