ಇ-ಚಲನ್ ಹೆಸರಲ್ಲಿ ಮಂಗಳೂರಿಗರಿಗೆ ಬಿಗ್ ಶಾಕ್: ನಕಲಿ APK ಫೈಲ್ ಕಳುಹಿಸಿ 44 ಲಕ್ಷ ರೂ. ದೋಚಿದ ಸೈಬರ್ ಖದೀಮರು

ಮಂಗಳೂರು: ವಾಹನ ಸವಾರರೇ ಎಚ್ಚರ! ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ (E-challan) ದಂಡ ಪಾವತಿಯ ಹೆಸರಿನಲ್ಲಿ ನಕಲಿ ಲಿಂಕ್ ಹಾಗೂ ಅಪಾಯಕಾರಿ ಎಪಿಕೆ (APK) ಫೈಲ್‌ಗಳನ್ನು ಮೊಬೈಲ್‌ಗಳಿಗೆ ಕಳುಹಿಸಿ ಸೈಬರ್ ವಂಚಕರು ಕೋಟಿ ಕೋಟಿ ಹಣ ದೋಚುತ್ತಿರುವ ಘಟನೆಗಳು ಕರಾವಳಿ ನಗರಿ ಮಂಗಳೂರಿನಲ್ಲಿ ಹೆಚ್ಚಾಗಿವೆ.

ಈ ಸೈಬರ್ ವಂಚನೆಯ ಜಾಲಕ್ಕೆ ಸಿಲುಕಿ ಮಂಗಳೂರು ನಗರ ವ್ಯಾಪ್ತಿಯಲ್ಲೇ ಜನರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದು, ಸಾರ್ವಜನಿಕರು ಅತ್ಯಂತ ಜಾಗರೂಕರಾಗಿರುವಂತೆ ಮಂಗಳೂರು ನಗರ ಪೊಲೀಸರು ಜಾಗೃತಿ ಹಾಗೂ ತುರ್ತು ಮುನ್ನೆಚ್ಚರಿಕಾ ಮಾರ್ಗದರ್ಶನ (Public Advisory) ಬಿಡುಗಡೆ ಮಾಡಿದ್ದಾರೆ.

ಒಂದೇ ವರ್ಷದಲ್ಲಿ ₹44 ಲಕ್ಷ ಕಳೆದುಕೊಂಡ ಸಂತ್ರಸ್ತರು!

ಮಂಗಳೂರು ನಗರ ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯಂತೆ, ಇ-ಚಲನ್ ಆಮಿಷದ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಈ ವರ್ಷವೊಂದರಲ್ಲೇ ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ. ಈ ವಂಚಕರ ಮಾಯಾಜಾಲಕ್ಕೆ ಬಿದ್ದ ಸಾರ್ವಜನಿಕರು ಒಟ್ಟಾರೆಯಾಗಿ ಬರೋಬ್ಬರಿ ₹44 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ಅಪರಿಚಿತ ಸಂಖ್ಯೆಗಳಿಂದ ಬರುವ ವಾಟ್ಸಾಪ್ (WhatsApp) ಅಥವಾ ಎಸ್‌ಎಂಎಸ್ (SMS) ಸಂದೇಶಗಳಲ್ಲಿ “ನಿಮ್ಮ ವಾಹನಕ್ಕೆ ದಂಡ ಬಿದ್ದಿದೆ, ತಕ್ಷಣ ಪಾವತಿಸಿ” ಎಂದು ಲಿಂಕ್ ಹಾಗೂ ಎಪಿಕೆ ಫೈಲ್ ಕಳುಹಿಸಿ ವಂಚಿಸಲಾಗುತ್ತಿದೆ.

ಸೈಬರ್ ವಂಚನೆಯಿಂದ ಬಚಾವ್ ಆಗಲು ಪೊಲೀಸರ ಪ್ರಮುಖ ಸೂಚನೆಗಳು:

ಸಾರ್ವಜನಿಕರು ತಮ್ಮ ಹಣವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಹಾಗೂ ವಂಚನೆಗೆ ಒಳಗಾಗದಂತೆ ತಡೆಯಲು ಮಂಗಳೂರು ಕಮಿಷನರೇಟ್ ಪೊಲೀಸರು ಈ ಕೆಳಗಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದ್ದಾರೆ. ನಿಮ್ಮ ವಾಹನದ ಮೇಲಿನ ಇ-ಚಲನ್ ಬಾಕಿ ಪರಿಶೀಲಿಸಲು ಮತ್ತು ದಂಡ ಪಾವತಿಸಲು ಕೇವಲ ಸರ್ಕಾರದ ಅಧಿಕೃತ ವೆಬ್‌ಸೈಟ್ https://echallan.parivahan.nic.in ಮಾತ್ರ ಬಳಸಿ.

ಬರುವ ಮೆಸೇಜ್ ನಿಜವೋ ಅಥವಾ ನಕಲಿಯೋ ಎಂಬ ಸಂಶಯವಿದ್ದರೆ ತಕ್ಷಣ ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ ತೆರಳಿ ಪರಿಶೀಲಿಸಿ. ಪೋಸ್ಟ್ ಮೂಲಕ ಬಂದ ನೋಟೀಸ್‌ಗಳ ದಂಡವನ್ನು ಅಧಿಕೃತ ‘ಮಂಗಳೂರು ಒನ್’ (Mangalore One), ‘ಕರ್ನಾಟಕ ಒನ್’ (Karnataka One) ವೆಬ್‌ಸೈಟ್/ಆ್ಯಪ್ ಮೂಲಕ ಅಥವಾ ನೇರವಾಗಿ ಟ್ರಾಫಿಕ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಪಾವತಿಸಿ.

ಇದನ್ನೂ ಓದಿ: ಬೆಳ್ತಂಗಡಿ: ಗೆಳೆಯರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದ 21 ವರ್ಷದ ಯುವಕ ನೀರಿನಲ್ಲಿ ಮುಳುಗಿ ದುರಂತ ಸಾವು

ಅಪರಿಚಿತ ಮೂಲಗಳಿಂದ ಬರುವ ಯಾವುದೇ ಎಪಿಕೆ (APK) ಫೈಲ್‌ಗಳನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಬೇಡಿ. ವೆಬ್‌ಸೈಟ್ URL ನಲ್ಲಿ https:// ಎಂದಿದ್ದ ತಕ್ಷಣವೇ ಅದನ್ನು ನೈಜ ವೆಬ್‌ಸೈಟ್ ಎಂದು ನಂಬಬೇಡಿ. ಇ-ಚಲನ್ ಹೆಸರಿನಲ್ಲಿ ಬರುವ ಯಾವುದೇ ಸಂದೇಶಗಳಿಗೆ ನಿಮ್ಮ ಬ್ಯಾಂಕ್ ಖಾತೆ ವಿವರ, ಡೆಬಿಟ್/ಕ್ರೆಡಿಟ್ ಕಾರ್ಡ್ ಮಾಹಿತಿ, ಸಿವಿವಿ (CVV) ಅಥವಾ ಒಟಿಪಿ (OTP) ಹಂಚಿಕೊಳ್ಳಬೇಡಿ. ಸಾರ್ವಜನಿಕರು ಇ-ಚಲನ್ ಮೆಸೇಜ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಸಂದೇಹಗಳಿದ್ದಲ್ಲಿ ಮಂಗಳೂರು ನಗರ ಪೊಲೀಸರ ಅಧಿಕೃತ ಸಹಾಯವಾಣಿ ಸಂಖ್ಯೆ 0824-2220823 ಅನ್ನು ಸಂಪರ್ಕಿಸಿ ದೃಢಪಡಿಸಿಕೊಳ್ಳಬಹುದು ಎಂದು ನಗರ ಪೊಲೀಸ್ ಕಮಿಷನರ್ ಕೋರಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ