ಬೆಳ್ತಂಗಡಿ: ಗೆಳೆಯರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದ 21 ವರ್ಷದ ಯುವಕ ನೀರಿನಲ್ಲಿ ಮುಳುಗಿ ದುರಂತ ಸಾವು

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಪಾರ್ಪಿಕಲ್ಲು ಎಂಬಲ್ಲಿ ಗೆಳೆಯರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದ 21 ವರ್ಷದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಭೀಕರ ಘಟನೆ ಮಂಗಳವಾರ (ಅಕ್ಟೋಬರ್ 20) ಮಧ್ಯಾಹ್ನ ನಡೆದಿದೆ.

ಕೌಕ್ರಾಡಿ ಗ್ರಾಮದ ಮೂಡುಬೈಲು ನಿವಾಸಿ ಜನಾರ್ದನ ಗೌಡ ಅವರ ಪುತ್ರ ಕೀರ್ತನ್ (21) ಮೃತಪಟ್ಟ ಅಭಾಗಿ ಯುವಕ. ಕೀರ್ತನ್ ತನ್ನ ಗೆಳೆಯರೊಂದಿಗೆ ನಿಡ್ಲೆ ಗ್ರಾಮದ ಪಾರ್ಪಿಕಲ್ಲು ಬಳಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದನು. ಈ ವೇಳೆ ನೀರಿನ ಆಳದ ಅಂದಾಜಿಲ್ಲದೆ ನದಿಯ ಆಳವಾದ ಭಾಗಕ್ಕೆ ತೆರಳಿದ ಪರಿಣಾಮ ಈಜಲಾಗದೆ ನೀರಿನಲ್ಲಿ ಮುಳುಗಿದ್ದಾನೆ.

ಇದನ್ನೂ ಓದಿ: ನಟಿ ರುಕ್ಮಿಣಿ ವಸಂತ್ ಎಐ ಅಶ್ಲೀಲ ವಿಡಿಯೋ ಕೇಸ್: ಮೂವರು ಕಿಡಿಗೇಡಿಗಳನ್ನು ಬಂಧಿಸಿದ ಸೈಬರ್ ಕ್ರೈಂ ಪೊಲೀಸರು

ಘಟನೆ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ಕೀರ್ತನನನ್ನು ನೀರಿನಿಂದ ಹೊರತೆಗೆದು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರಾದರೂ, ಆತನ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ