ಹೊನ್ನಾವರ: ಮನೆಯ ಶೌಚಾಲಯದ ಕೊಠಡಿಯಲ್ಲಿ ಅಕ್ರಮವಾಗಿ ಗೋವಾ ಮದ್ಯವನ್ನು ದಾಸ್ತಾನು ಮಾಡಿ ಇರಿಸಿದ್ದ ಜಾಗದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ನಡೆದಿದೆ. ದಾಳಿಯ ವೇಳೆ ಶೌಚಾಲಯದಲ್ಲಿ ಬಾಂಟಲಿಗಳಲ್ಲಿ ಸಂಗ್ರಹಿಸಿಡಲಾಗಿದ್ದ ಒಟ್ಟು 30 ಲೀಟರ್ ಗೋವಾ ಫೆನ್ನಿ (Goa Feni) ಮದ್ಯವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಶೌಚಾಲಯವೇ ಅಕ್ರಮ ಮದ್ಯದ ಗೋದಾಮು!
ಹೊನ್ನಾವರ ತಾಲೂಕಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ತಗ್ಗುಪಾಳ್ಯ ಎಂಬಲ್ಲಿ ರೆಮಂದಿನ್ ಸಾಂತೋಲಿನ್ ಡಿಕೋಸ್ತಾ ಎಂಬವರಿಗೆ ಸೇರಿದ ಮನೆಯ ಪಕ್ಕದಲ್ಲಿದ್ದ ಶೌಚಾಲಯ ಕೊಠಡಿಯಲ್ಲಿ ಈ ಅಕ್ರಮ ಮದ್ಯವನ್ನು ದಾಸ್ತಾನು ಮಾಡಲಾಗಿತ್ತು.
ಹೊನ್ನಾವರ ಉಪವಿಭಾಗದ ಅಬಕಾರಿ ನಿರೀಕ್ಷಕಿ (Excise Inspector) ಶಾಂತಾ ಅಪ್ಪಯ್ಯ ತೇರದಾಳ ಅವರ ನೇತೃತ್ವದ ಅಧಿಕೃತ ತಂಡ ಈಶಸ್ವಿಯಾಗಿ ಈ ದಾಳಿ ಕಾರ್ಯಾಚರಣೆ ನಡೆಸಿದೆ. ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟ ಮಾಡಲು ಅನುಮತಿ ಹೊಂದಿರುವ ಅಪಾರ ಪ್ರಮಾಣದ ಫೆನ್ನಿ ಮದ್ಯವನ್ನು ತೆರಿಗೆ ವಂಚಿಸಿ ಅಕ್ರಮವಾಗಿ ಗಡಿ ದಾಟಿಸಿ ತಂದು ಇಲ್ಲಿ ಮಾರಾಟಕ್ಕೆ ಇಡಲಾಗಿತ್ತು.
ಇದನ್ನೂ ಓದಿ: ಉತ್ತರ ಕನ್ನಡ: ವೀಸಾ ಅವಧಿ ಮುಗಿದರೂ ಅಕ್ರಮ ವಾಸ; ಇಸ್ರೇಲ್ ಪ್ರಜೆಯನ್ನು ವಶಕ್ಕೆ ಪಡೆದ ಹೊನ್ನಾವರ ಪೊಲೀಸರು
ದಾಳಿಯ ಸಮಯದಲ್ಲಿ 30 ಲೀಟರ್ ಮದ್ಯವನ್ನು ಜಪ್ತಿ ಮಾಡಿರುವ ಅಧಿಕಾರಿಗಳು, ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿದ್ದ ಆರೋಪಿ ರೆಮಂದಿನ್ ಸಾಂತೋಲಿನ್ ಡಿಕೋಸ್ತಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

