ಬಂಟ್ವಾಳ: ರಾಜ್ಯ ಸರ್ಕಾರ ಪ್ರಕಟಿಸಿರುವ 71 ಸಾಧಕರ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ಬಂಟ್ವಾಳದ ಹಿರಿಯ ಸಾಹಿತಿ ಹಾಗೂ ಸಂಘಟಕ ಎ.ಸಿ. ಭಂಡಾರಿ (ಅಂಬಾಡೆಬೈಲು ಚಂದ್ರಶೇಖರ ಭಂಡಾರಿ) ಅವರು ಭಾಜನರಾಗಿದ್ದಾರೆ. ತುಳು ಭಾಷೆ, ಸಾಹಿತ್ಯ, ರಂಗಭೂಮಿ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ದೀರ್ಘಕಾಲದಿಂದ ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡಿರುವ 84ರ ಹರೆಯದ ಎ.ಸಿ. ಭಂಡಾರಿ ಅವರ ಸುದೀರ್ಘ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ಶಿಕ್ಷಣ, ಉದ್ಯೋಗ ಹಾಗೂ ಸಂಸ್ಥೆಯ ಬೆಳವಣಿಗೆ:
1942 ಸೆಪ್ಟೆಂಬರ್ 26ರಂದು ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದಲ್ಲಿ ಜನಿಸಿದ ಅವರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿದರು. ಮಂಗಳೂರಿನಲ್ಲಿ ಟೈಪ್ ರೈಟಿಂಗ್ ಶಿಕ್ಷಣ ಪಡೆದ ನಂತರ, 1965ರಲ್ಲಿ ಕದ್ರಿಯಲ್ಲಿ ‘ವಿಜಯಾ ಟೈಪ್ ರೈಟಿಂಗ್ ತರಬೇತಿ ಕೇಂದ್ರ’ ಆರಂಭಿಸಿದರು. 1968ರಲ್ಲಿ ಸರ್ಕಾರದ ಮಾನ್ಯತೆ ಪಡೆದ ಈ ಸಂಸ್ಥೆಯ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದ ಅವರು, ಬಂಟ್ವಾಳ ಮತ್ತು ಬೆಳ್ತಂಗಡಿ ಸೇರಿದಂತೆ ಹಲವೆಡೆ ಶಾಖೆಗಳನ್ನು ವಿಸ್ತರಿಸಿದರು.
ಇದನ್ನು ಓದಿ: 71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 71 ಸಾಧಕರಿಗೆ ಒಲಿದ ಅತ್ಯುನ್ನತ ಪುರಸ್ಕಾರ
ರಂಗಭೂಮಿ ಸಾಧನೆ ಮತ್ತು ತುಳುಕೂಟ ಸ್ಥಾಪನೆ:
ಮಂಗಳೂರಿನಲ್ಲಿ ಟೈಪ್ ರೈಟಿಂಗ್ ಸಂಸ್ಥೆ ನಡೆಸುತ್ತಿದ್ದ ವೇಳೆ ಖ್ಯಾತ ರಂಗಕರ್ಮಿಗಳ ಒಡನಾಟ ಪಡೆದ ಅವರು, ‘ದಳವಾಯಿ ದುಗ್ಗಳ್ಣ’ (ತುಳು ರಾಜ್ಯ ಅವಸಾನ) ಹಾಗೂ ‘ಶಾಂತಿ’ ನಾಟಕಗಳಲ್ಲಿನ ಹಾಸ್ಯ ಪಾತ್ರಗಳ ಮೂಲಕ ರಂಗರಂಗದಲ್ಲಿ ಯಶಸ್ಸು ಗಳಿಸಿದರು.
ತುಳು ಭಾಷೆಯ ಪುನರುತ್ಥಾನಕ್ಕಾಗಿ 1969ರಲ್ಲಿ ಮಂಗಳೂರಿನ ಕಂಕನಾಡಿಯ ಎಸ್.ಆರ್. ಹೆಗ್ಡೆ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು, ಪ್ರಪ್ರಥಮ ತುಳು ಸಂಘಟನೆಯಾದ “ತುಳುಕೂಟ ಕುಡ್ಲ” ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣರಾದರು. ಅಲ್ಲದೆ, ‘ತುಳುಕೂಟ’ ತಿಂಗಳ ಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ತುಳುಭಾಷಾ ಸಂಘಟಕರಾಗಿ ಮತ್ತು ಮುಂಚೂಣಿ ಹೋರಾಟಗಾರರಾಗಿ:
1969ರಿಂದ ಇದುವರೆಗೆ ನಡೆದ ಪ್ರಮುಖ ತುಳು ಸಮ್ಮೇಳನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, 2009ರಲ್ಲಿ ಉಜಿರೆಯಲ್ಲಿ ನಡೆದ ‘ವಿಶ್ವ ತುಳು ಸಮ್ಮೇಳನ’ದ ಬಂಟ್ವಾಳ ಸಮಿತಿಯ ಸಂಚಾಲಕರಾಗಿ ಪೂರ್ವಭಾವಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
2014ರಲ್ಲಿ ಅಡ್ಯಾರ್ನಲ್ಲಿ ನಡೆದ ‘ವಿಶ್ವ ತುಳುವೆರೆ ಪರ್ಬ’ದ ಪ್ರಮುಖ ಮಾರ್ಗದರ್ಶಕರಾಗಿ ದುಡಿದು, ಸರ್ಕಾರದಿಂದ ಅನುದಾನ ತರುವುದರಲ್ಲಿ ಹಾಗೂ ಉಳಿತಾಯ ಮಾಡಿದ ಹಣದಿಂದ ಕಾವೂರಿನಲ್ಲಿ ಅಖಿಲ ಭಾರತ ತುಳು ಒಕ್ಕೂಟಕ್ಕೆ ಸ್ವಂತ ಕಚೇರಿ ಕಟ್ಟಡ ಖರೀದಿಸಲು ಪ್ರೇರಣೆಯಾಗಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

