ನಂದಿನಿ ಮೊಸರು ದರದಲ್ಲಿ ಬರೋಬ್ಬರಿ 14ರೂ. ಏರಿಕೆ: ಅಂಗಡಿ ಮಾಲೀಕರಿಂದಲೂ ಹೆಚ್ಚಳ

ಬೆಂಗಳೂರು: ರಾಜ್ಯದ ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕರ್ನಾಟಕ ಹಾಲು ಮಹಾಮಂಡಳಿ (KMF) ನಂದಿನಿ ಹಾಲಿನ ಬೆಪೆಯಲ್ಲಿ 8ರೂ. ಏರಿಸುವುದರ ಜೊತೆಗೆ ಮೊಸರಿನ ಬೆಲೆಯಲ್ಲೀ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಆರ್ಥಿಕ ಹೊಡೆತ ನೀಡಿದೆ. ಪರಿಷ್ಕೃತ ದರಗಳು ನವೆಂಬರ್ 1 ರಿಂದಲೇ ಜಾರಿಗೆ ಬರಲಿವೆ.

ಕೆಎಂಎಫ್ ಪರಿಷ್ಕರಿಸಿರುವ ಮೊಸರಿನ ಹೊಸ ದರದ ಪ್ರಕಾರ, 500 ಗ್ರಾಂ ಮೊಸರಿನ ಪ್ಯಾಕೆಟ್ ಬೆಲೆ ₹28ರಿಂದ ₹34ಕ್ಕೆ ಏರಿಕೆಯಾಗಿದೆ. ಅಂದರೆ ₹6 ಹೆಚ್ಚಳವಾಗಿದೆ. ಅದೇ ರೀತಿ ಒಂದು ಕೆ.ಜಿ. ಮೊಸರಿನ ಪ್ಯಾಕೆಟ್ ಬೆಲೆ ₹54ರಿಂದ ₹68ಕ್ಕೆ ಏರಿಕೆಯಾಗಿದ್ದು, ಬರೋಬ್ಬರಿ ₹14 ಹೆಚ್ಚಳ ಮಾಡಲಾಗಿದೆ.

ಜಾನುವಾರುಗಳ ನಿರ್ವಹಣೆ, ಮೇವಿನ ವೆಚ್ಚ ಸೇರಿದಂತೆ ಹಾಲು ಉತ್ಪಾದನೆಯ ಖರ್ಚು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರೈತರ ಹಿತದೃಷ್ಟಿಯಿಂದ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಕೆಎಂಎಫ್ ತಿಳಿಸಿದೆ.

ಇದನ್ನೂ ಓದಿ: ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್ ಪ್ರಯಾಣಿಕರಿಗೂ ಶೀಘ್ರವೇ ದರ ಏರಿಕೆ ಬಿಸಿ

ಹಾಲಿನ ದರದಲ್ಲಿ 8ರೂ. ರಾಜ್ಯ ಸರ್ಕಾರ ಹೆಚ್ಚಿಸಿದರೆ, ಅಂಗಡಿ ಮಾಲೀಕರು 2ರೂ. ಹೆಚ್ಚಿಸಲಿದ್ದಾರೆ. ಇದರಿಂದಾಗಿ 10ರೂ. ಏರಿಕೆಯಾದಂತಾಗಲಿದೆ. ಮೊಸರಿನ ಬೆಲೆಯಲ್ಲಿ 14ರೂ. ಸರ್ಕಾರ ಏರಿಸಿದರೆ, ಅಂಗಡಿ ಮಾಲೀಕರು 2ರೂ. ಏರಿಸಲಿದ್ದಾರೆ. ಇದರಿಂದಾಗಿ ಮೊಸರಿನ ಬೆಲೆಯಲ್ಲಿ 16ರೂ. ಏರಿಕೆಯಾದಂತಾಗಲಿದೆ.

ಹೋಟೆಲ್ ತಿಂಡಿ, ತಿನಿಸುಗಳ ಬೆಲೆಯೂ ಏರಿಕೆ ಸಾಧ್ಯತೆ

ಹಾಲು ಮತ್ತು ಮೊಸರಿನ ದರ ಏರಿಕೆಯ ಪರಿಣಾಮ ಹೋಟೆಲ್ ಹಾಗೂ ಉಪಾಹಾರ ಗೃಹಗಳಲ್ಲೂ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಹಾಲಿನಿಂದ ತಯಾರಿಸುವ ಚಹಾ, ಕಾಫಿ ಸೇರಿದಂತೆ ವಿವಿಧ ಪಾನೀಯಗಳ ದರ ಏರಿಕೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಗ್ರಾಹಕರಿಗೆ ಡಬಲ್ ಶಾಕ್: ನಂದಿನಿ ಹಾಲಿನ ಬೆಲೆ ಬರೋಬ್ಬರಿ 10 ರೂ. ಏರಿಕೆ; ರಿಟೇಲರ್‌ಗಳಿಂದ ಲೀಟರ್‌ಗೆ ಮತ್ತೆ 2 ರೂ. ಹೆಚ್ಚಳ

ಅದೇ ರೀತಿ ಮೊಸರಿನ ಬಳಕೆಯಿರುವ ಗೋಳಿಬಜೆ, ಬನ್ಸ್, ಮೊಸರೊಡೆ, ಮೊಸರವಲಕ್ಕಿ, ದಹಿಪುರಿ ಸೇರಿದಂತೆ ಹಲವು ಜನಪ್ರಿಯ ತಿನಿಸುಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ.

ಒಂದೆಡೆ ಹಾಲಿನ ದರ ಏರಿಕೆಯಿಂದ ಹೈನುಗಾರರಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆಯಿದ್ದರೆ, ಮತ್ತೊಂದೆಡೆ ಹಾಲು ಮತ್ತು ಮೊಸರನ್ನು ನಿತ್ಯ ಬಳಕೆ ಮಾಡುವ ಜನಸಾಮಾನ್ಯರು ಹಾಗೂ ಹೋಟೆಲ್ ಉದ್ಯಮದವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರಿಗೆ ನಂದಿನಿ ದರ ಏರಿಕೆ ಮತ್ತೊಂದು ಆರ್ಥಿಕ ಹೊರೆ ತಂದಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ