ಸೌಜನ್ಯ ಪ್ರಕರಣ: ಬೆಳ್ತಂಗಡಿಗೆ ಇಂದು SIT ತಂಡ ಭೇಟಿ ಸಾಧ್ಯತೆ; ಮೃತದೇಹ ಪತ್ತೆಯಾದ ಸ್ಥಳದಲ್ಲಿ ಮಹತ್ವದ ಪರಿಶೀಲನೆ

ಬೆಳ್ತಂಗಡಿ: ರಾಜ್ಯಾದ್ಯಂತ ಗಮನ ಸೆಳೆದಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಭೇಟಿ ನೀಡುವ ಸಾಧ್ಯತೆಯಿದೆ.

ಸೌಜನ್ಯ ಅವರ ಮೃತದೇಹ ಪತ್ತೆಯಾಗಿದ್ದ ಸ್ಥಳಕ್ಕೆ SIT ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲೇ ಅಪರಾಧ ನಡೆದಿರುವ ರೀತಿಯನ್ನು ಮರುಸೃಷ್ಟಿಸುವ (ಕ್ರೈಂ ಸೀನ್ ರೀಕ್ರಿಯೇಷನ್) ಮೂಲಕ ತನಿಖೆ ನಡೆಸುವ ಸಾಧ್ಯತೆಯೂ ಇದೆ.

ಸಿಬಿಐ ತನಿಖೆಯ ವೇಳೆ ಮೃತದೇಹ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಸಮರ್ಪಕ ಪರಿಶೀಲನೆ ನಡೆಸದಿರುವ ಅಂಶವನ್ನು ಸುಪ್ರೀಂ ಕೋರ್ಟ್ ಈ ಹಿಂದೆ ಪ್ರಸ್ತಾಪಿಸಿತ್ತು ಎನ್ನಲಾಗಿದ್ದು, ಅಂತಹ ಲೋಪಗಳು ಮರುತನಿಖೆಯಲ್ಲಿ ಮರುಕಳಿಸದಂತೆ SIT ಎಚ್ಚರಿಕೆ ವಹಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಸೌಜನ್ಯ ಪ್ರಕರಣದ ತನಿಖೆಗೆ ಬಿಗ್ ಟ್ವಿಸ್ಟ್: SIT ಮುಖ್ಯಸ್ಥ ಸ್ಥಾನದಿಂದ ಎನ್. ಶಶಿಕುಮಾರ್ ಔಟ್​​, ಹೊಸ ಮುಖ್ಯಸ್ಥ ಯಾರು?

ಇದಲ್ಲದೆ, ಉಜಿರೆಯ ಕಾಲೇಜು ಹಾಗೂ ಸೌಜನ್ಯ ಅವರ ಮನೆಗೂ SIT ತಂಡ ಭೇಟಿ ನೀಡುವ ಸಾಧ್ಯತೆ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ, ಸಾಕ್ಷ್ಯಾಧಾರಗಳ ಮರುಪರಿಶೀಲನೆ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಯುವ ನಿರೀಕ್ಷೆಯಿದೆ.

ಆದರೆ, SIT ತಂಡದ ಭೇಟಿಯ ಅಧಿಕೃತ ವೇಳಾಪಟ್ಟಿ ಹಾಗೂ ಪರಿಶೀಲನೆಯ ವಿವರಗಳ ಬಗ್ಗೆ ಅಧಿಕೃತ ದೃಢೀಕರಣ ಲಭ್ಯವಾಗಬೇಕಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ