ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ವಿವಾದಾತ್ಮಕ ಸ್ಟಿಂಗ್ ಆಪರೇಷನ್ ಹಾಗೂ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ಸರಣಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಪ್ರಮುಖ ಕರೆಗಳ ಮಾಹಿತಿಯನ್ನು ಬಹಿರಂಗಪಡಿಸಿದ ಅವರು, ನಗರ ಪೊಲೀಸ್ ಆಯುಕ್ತರ ನಡೆ ಕಾನೂನುಬಾಹಿರ ಹಾಗೂ ಸರ್ಕಾರದ ಒತ್ತಡಕ್ಕೆ ಮಣಿದ ಹೇಳಿಕೆ ಎಂದು ಕಿಡಿಕಾರಿದ್ದಾರೆ.
“ಪೆನ್ಡ್ರೈವ್ ಹಂಚಿದ್ದು ಡಿಕೆಶಿ-ಕಾರ್ತಿಕ್ ಷಡ್ಯಂತ್ರ!”: ಕುಮಾರಸ್ವಾಮಿ ಸ್ಫೋಟಕ ಆರೋಪ
“ಪ್ರಜ್ವಲ್ ಪೆನ್ಡ್ರೈವ್ ಅನ್ನು ನಾನೇ ಹಂಚಿದ್ದು ಅಂತ ಕಾಂಗ್ರೆಸ್ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೆ ಪೆನ್ಡ್ರೈವ್ ಹಂಚಿದ್ದು ಪ್ರಜ್ವಲ್ ಕಾರು ಚಾಲಕ ಕಾರ್ತಿಕ್. ಆಗಸ್ಟ್ 5 ಮತ್ತು 6, 2023ರಲ್ಲಿ ಕಾರ್ತಿಕ್ನನ್ನು ತನ್ನ ಮನೆಗೆ ಕರೆಸಿಕೊಂಡು ಈ ಇಡೀ ಷಡ್ಯಂತ್ರ ಹೆಣೆದದ್ದು ಡಿಸಿಎಂ ಡಿ.ಕೆ. ಶಿವಕುಮಾರ್. ಆ ಕ್ಯಾಸೆಟ್ ಆಗಿದ್ದು ನಿಮ್ಮ ಮನೆಯಲ್ಲಾ? ಈ ಬಗ್ಗೆ ತನಿಖೆಯಾಗಿದೆಯಾ?” ಎಂದು ಸಚಿವ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಅವರನ್ನು ನೇರವಾಗಿ ಪ್ರಶ್ನಿಸಿದರು. “ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ರಾಹುಲ್ ಗಾಂಧಿ ಪ್ರಧಾನಿಯಾಗುವುದನ್ನು ತಪ್ಪಿಸಿದೆವು ಎಂಬ ಒಂದೇ ಕಾರಣಕ್ಕೆ ಕಾಂಗ್ರೆಸ್ ನಾಯಕರು ನನ್ನ ಕುಟುಂಬವನ್ನು ನಿರ್ನಾಮ ಮಾಡಲು ಹೊರಟಿದ್ದಾರೆ,” ಎಂದು ದೂರಿದರು.
“ಕಮಿಷನರ್ ನಡೆ ಕಾನೂನುಬಾಹಿರ, ನನಗೂ ಸಮಯ ಬರುತ್ತೆ!”: ಎಚ್ಡಿಕೆ ಗರಂ
“ಸ್ಟೈಫಂಡರಿ ರಿತೇಶ್ ಪಾಂಡೆ ಯಾರೆಂಬುದೇ ನನಗೆ ಗೊತ್ತಿಲ್ಲ, ಆತನ ಮುಖವನ್ನೂ ನಾನು ನೋಡಿಲ್ಲ. ನಮ್ಮ ದೆಹಲಿ ಮನೆಗೆ ಪ್ರತಿದಿನ ಕೆಲಸ ಹೇಳಿಕೊಂಡು ನೂರಾರು ಜನ ಬರುತ್ತಾರೆ. ನನ್ನ ಮನೆಯಲ್ಲಿ ಅರೆಸ್ಟ್ ಮಾಡಿದ್ದಾರಾ? ತನಿಖೆ ಮಾಡಿ ಯಾರೂ ಬೇಡ ಅಂದಿಲ್ಲ. ಆದರೆ ನಿನ್ನೆ ಪೊಲೀಸ್ ಆಯುಕ್ತರು ನೀಡಿರುವ ಹೇಳಿಕೆ ಸಂಪೂರ್ಣ ಕಾನೂನುಬಾಹಿರ. ಅವರು ಸರ್ಕಾರದ ಒತ್ತಡಕ್ಕೆ ಮಣಿದು ಈ ರೀತಿ ಹೇಳಿಕೆ ನೀಡಿದ್ದಾರೆ. ನಾನು ಕೋರ್ಟ್ಗೆ ಹೋದರೆ ಆ ಅಧಿಕಾರಿಗೆ ಏನಾಗುತ್ತದೆ ಎಂಬುದು ಗೊತ್ತಿದೆ.”
“ಸಿದ್ದರಾಮಯ್ಯಗೆ ಕ್ಲೀನ್ಚಿಟ್ ನೀಡಿ ಸರ್ಕಾರ ಉಳಿಸಿಕೊಳ್ಳುವುದೇ ಈ ತನಿಖೆಯ ಮೂಲ ಉದ್ದೇಶ. ಪ್ರಕರಣದಲ್ಲಿ ನಮ್ಮ ಪಕ್ಷದವರ ಪಾತ್ರವಿದೆ ಎಂದು ಯತೀಂದ್ರ ಖುದ್ದು ಹೇಳಿದ್ದಾರೆ. ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕಟ್ಟುಕಥೆ ಎಂದು ಪೊಲೀಸರು ವರದಿ ನೀಡಿ ಹಳ್ಳ ಹಿಡಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸಚಿವರನ್ನು ಬಂಧಿಸುತ್ತಾರೆ ಎಂದು ರಾಜ್ಯದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಯಾವ ಕೇಂದ್ರ ಸಚಿವರನ್ನು ಬಂಧಿಸುತ್ತಾರೋ ನೋಡೋಣ! ನಮ್ಮ ಮನೆ ಮೇಲೆ ದಾಳಿ ನಡೆಸಲು ಬನ್ನಿ, ನಾನು ತಯಾರಿದ್ದೇನೆ ಎಂದು ಹೇಳಿದ್ದಾರೆ.
“ನನ್ನನ್ನು ಯಾರೂ ಟಚ್ ಮಾಡೋಕಾಗಲ್ಲ”: “ಈ ಕುಮಾರಸ್ವಾಮಿಯನ್ನು ಯಾರೂ ಅಷ್ಟು ಸುಲಭವಾಗಿ ಟಚ್ ಮಾಡಲು ಆಗುವುದಿಲ್ಲ. ಇಂತಹ ಟ್ರೇಲರ್ಗಳನ್ನು ನಾನು ಎಷ್ಟೋ ನೋಡಿದ್ದೇನೆ. ನಿಮ್ಮ ಕೆಪಿಎಸ್ಸಿ ಕರ್ಮಕಾಂಡಗಳನ್ನು ಮರೆಮಾಚಲು ನನ್ನ ಮೇಲೆ ಇಡಿ ದಾಳಿಗೆ ಒತ್ತಡ ಎಂದು ಸುಳ್ಳು ಆರೋಪ ಮಾಡುತ್ತಿದ್ದೀರಾ?. 2011ರ ಘಟನೆಯನ್ನು 2023ರಲ್ಲಿ ವಿಡಿಯೋ ಮಾಡಿದ್ದಾರೆ. 2015ರಲ್ಲಿ ಕೃಪಾ ಆಳ್ವಾ ಅವರನ್ನ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದು ಸಿದ್ದರಾಮಯ್ಯ. ಕೃಪಾ ಆಳ್ವಾ, ಖಾಸಗಿ ಚಾನೆಲ್ ಮುಖ್ಯಸ್ಥ ಹಾಗೂ ಮತ್ತೊಬ್ಬರು ಸೇರಿ ಕೇರಳದ ಹೆಣ್ಣು ಮಗಳನ್ನು ಕೂರಿಸಿ ವಿಡಿಯೋ ಮಾಡಿದ್ದಾರೆ. ಕೃಪಾ ಆಳ್ವಾಗೂ ಹಾಗೂ ಕೇರಳದ ಆ ಮುಸ್ಲಿಂ ಹೆಣ್ಣು ಮಗಳಿಗೂ ಏನು ಸಂಬಂಧ? ಈ ಬಗ್ಗೆ ಯಾಕೆ ತನಿಖೆ ಮಾಡಿಲ್ಲ?” ಎಂದು ಎಚ್ಡಿಕೆ ಪ್ರಶ್ನಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

