“ಗೆದ್ದಾಗ ಜನ, ಸೋತಾಗ ಇವಿಎಂ ಕಟ್ಟುಕಥೆ”: ರಾಹುಲ್ ಗಾಂಧಿ ಹಾಗೂ ರೇವಂತ್ ರೆಡ್ಡಿಗೆ ಹೈದರಾಬಾದ್‌ನಲ್ಲಿ ಅಮಿತ್ ಶಾ ತಿರುಗೇಟು

ಹೈದರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಇಂದು (ನವೆಂಬರ್ 2) ಬಿಜೆಪಿ ಹಮ್ಮಿಕೊಂಡಿದ್ದ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ’ ಬೃಹತ್ ಪಾದಯಾತ್ರೆಯಲ್ಲಿ ಭಾಗವಹಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾರ್ಯಕ್ರಮಕ್ಕೂ ಮುನ್ನ ಹೈದರಾಬಾದ್‌ನ ಪ್ರಸಿದ್ಧ ಭಾಗ್ಯಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅಮಿತ್ ಶಾ, ತಮ್ಮ ಭಾಷಣದ ಆರಂಭದಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸ್ಮರಿಸಿ, “ಅಂದು ಸರ್ದಾರ್ ಪಟೇಲರು ಹೈದರಾಬಾದ್ ನಿಜಾಮನನ್ನು ಶರಣಾಗುವಂತೆ ಮಾಡದೇ ಹೋಗಿದ್ದರೆ, ಹೈದರಾಬಾದ್ ಭಾರತದ ಭಾಗವಾಗುತ್ತಿರಲಿಲ್ಲ” ಎಂದು ನುಡಿದರು.

“ಮಾಕ್ ಪಾರ್ಲಿಮೆಂಟ್‌ನಲ್ಲಾದ್ರೂ ಪ್ರಧಾನಿಯಾಗಲಿ”: ಅಮಿತ್ ಶಾ ಲೇವಡಿ

ಎರಡು ದಿನಗಳ ಹಿಂದೆ ಕಾಂಗ್ರೆಸ್ ಸಂಘಟಿಸಿದ್ದ ಅಣಕು ಸಂಸತ್‌ (Mock Parliament) ಕುರಿತು ವ್ಯಂಗ್ಯವಾಡಿದ ಕೇಂದ್ರ ಗೃಹ ಸಚಿವ, “ಆ ಮಾಕ್ ಪಾರ್ಲಿಮೆಂಟ್‌ನಲ್ಲಾದರೂ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳಬಹುದಿತ್ತು. ಏಕೆಂದರೆ ನೈಜ ಸಂಸತ್ತಿನಲ್ಲಿ ಅವರಿಗೆ ಪ್ರಧಾನಿ ಹುದ್ದೆಗೇರುವ ಅವಕಾಶ ಎಂದಿಗೂ ಸಿಗುವುದಿಲ್ಲ. ಕನಿಷ್ಠ ಮಾಕ್ ಪಾರ್ಲಿಮೆಂಟ್‌ನಲ್ಲಾದರೂ ಅವರು ಪ್ರಧಾನಿಯಾದರೆ ಸೋನಿಯಾ ಗಾಂಧಿ ಅವರಿಗೆ ಕೊಂಚ ಸಂತೋಷವಾಗುತ್ತಿತ್ತು. ವರ್ಷಕ್ಕೆ ಮೂರ್ನಾಲ್ಕು ತಿಂಗಳು ಮಾತ್ರ ಭಾರತದಲ್ಲಿದ್ದು, ಉಳಿದ ಸಮಯ ವಿದೇಶ ಪ್ರವಾಸ ಮಾಡುವ ಮೂಲಕ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ದೇಶದಲ್ಲಿ ಹೆಚ್ಚು ಸಮಯ ಕಳೆದು, ಜನರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಬೇಕು.” ಎಂದು ಹೇಳಿದ್ದಾರೆ.

“ಮತ ಕಳವು ಅಲ್ಲ, ಬಾಂಗ್ಲಾ ನುಸುಳುಕೋರರ ರಕ್ಷಣೆ ಸಮಾವೇಶ!”: ಎಸ್​ಐಆರ್ ಪರ ಬಿಗಿ ಪಟ್ಟು

ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಇಂಡಿಯಾ’ (INDIA) ಮೈತ್ರಿಕೂಟ ನಡೆಸಿದ ಸಮಾವೇಶವನ್ನು ತೀವ್ರವಾಗಿ ಖಂಡಿಸಿದ ಅಮಿತ್ ಶಾ, “ಅದು ‘ವೋಟ್ ಬಚಾವೋ’ ಸಮಾವೇಶವಾಗಿರಲಿಲ್ಲ, ಬದಲಿಗೆ ನುಸುಳುಕೋರರ ರಕ್ಷಣೆ ಸಮಾವೇಶವಾಗಿತ್ತು. ಕಾಂಗ್ರೆಸ್ ತಮ್ಮ ಅಕ್ರಮ ಮತಬ್ಯಾಂಕ್ ಆಗಿರುವ ಬಾಂಗ್ಲಾದೇಶಿ ನುಸುಳುಕೋರರನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳುವ ದುರುದ್ದೇಶದಿಂದ ಚುನಾವಣಾ ಆಯೋಗದ ‘ಎಸ್​ಐಆರ್’ (SIR) ಪ್ರಕ್ರಿಯೆಯನ್ನು ವಿರೋಧಿಸುತ್ತಿದೆ. ದೇಶದಲ್ಲಿ ಸುಮಾರು 3 ಕೋಟಿಯಷ್ಟು ನಕಲಿ ಮತಗಳಿದ್ದು, ಅವರೆಲ್ಲರೂ ಬಾಂಗ್ಲಾದೇಶಿ ನುಸುಳುಕೋರರು. ರಾಹುಲ್ ಗಾಂಧಿ ಎಷ್ಟೇ ವಿರೋಧಿಸಿದರೂ ಸರಿ, ಬಿಜೆಪಿ ಪ್ರತಿಯೊಬ್ಬ ನುಸುಳುಕೋರನನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿ ದೇಶದಿಂದ ಗಡಿಪಾರು ಮಾಡುವುದು ಖಚಿತ!”

ಇದನ್ನೂ ಓದಿ: ರಾಹುಲ್ ಗಾಂಧಿಗೆ ಭಾರಿ ಬಿಗ್ ರಿಲೀಫ್: ಅಮಿತ್ ಶಾ ವಿರುದ್ಧದ ಮಾನನಷ್ಟ ಕೇಸ್ ವಜಾ

ಇವಿಎಂ ಟೀಕೆಗೆ ತಿರುಗೇಟು & ‘ವೆಂಟಿಲೇಟರ್ ಪಕ್ಷ’ ಟಾಂಗ್!

“ಇವಿಎಂಗಳಲ್ಲಿ (EVM) ದೋಷವಿದ್ದರೆ ನಿಮ್ಮ ಪಕ್ಷದ ರೇವಂತ್ ರೆಡ್ಡಿ ತೆಲಂಗಾಣದಲ್ಲಿ ಮುಖ್ಯಮಂತ್ರಿಯಾಗಿದ್ದು ಹೇಗೆ? ಕೇರಳ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶಗಳಲ್ಲಿ ನಿಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದಿದ್ದು ಹೇಗೆ? ಗೆದ್ದಾಗ ಜನರಿಗೆ ಶ್ರೇಯಸ್ಸು ನೀಡಿ, ಸೋತಾಗ ಇವಿಎಂ ಮೇಲೆ ಗೂಬೆ ಕೂರಿಸುವುದು ಕಾಂಗ್ರೆಸ್ ನಾಯಕರ ಚಟ. ಕಾಂಗ್ರೆಸ್ ವೆಂಟಿಲೇಟರ್‌ನಲ್ಲಿರುವ ಪಕ್ಷ. ವೆಂಟಿಲೇಟರ್‌ನಲ್ಲಿರುವ ಆ ಪಕ್ಷ ಪ್ರಧಾನಿ ಮೋದಿ ಜೊತೆ ಮ್ಯಾರಥಾನ್ ಓಡಲು ಸಾಧ್ಯವೇ? ರಾಹುಲ್ ಗಾಂಧಿ ಅವರನ್ನು ನಮ್ಮ ಬಿಜೆಪಿಯ ತೆಲಂಗಾಣ ಯುವ ಮೋರ್ಚಾ ಅಧ್ಯಕ್ಷರೂ ಸಹ ಚರ್ಚೆಯಲ್ಲಿ ಸೋಲಿಸಬಲ್ಲರು. ಡಿಸೆಂಬರ್ 31, 2029ರ ಒಳಗಾಗಿ ಭಾರತವನ್ನು ಮಾದಕವಸ್ತು (ಡ್ರಗ್ಸ್) ಮುಕ್ತ ದೇಶವನ್ನಾಗಿ ಮಾಡಲು ಸರ್ಕಾರ ಪಣತೊಟ್ಟಿದೆ,” ಎಂದು ಅಮಿತ್ ಶಾ ಘೋಷಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ