ಬೀದರ್ಸ; ಪ್ರೀತಿಸಿದ ಯುವಕನ ಮಾತು ನಂಬಿ, ತಾಳಿ ಕಟ್ಟಿದ ಗಂಡನಿಗೆ ವಿಚ್ಛೇದನ (Divorce) ನೀಡಿ ಬಂದ ಮಹಿಳೆಗೆ ಪ್ರಿಯಕರ ಭಾರಿ ದ್ರೋಹ ಎಸಗಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನೆಲವಾಡ ಗ್ರಾಮದಲ್ಲಿ ನಡೆದಿದೆ. ಗಂಡನಿಗೆ ಡಿವೋರ್ಸ್ ನೀಡಿ ಮನೆಗೆ ಬರುತ್ತಿದ್ದಂತೆ ಪ್ರಿಯಕರ ಪರಾರಿಯಾಗಿದ್ದು, ಇದೀಗ ಮಹಿಳೆಯ ಬದುಕು ಅತ್ತ ಗಂಡನೂ ಇಲ್ಲದೆ, ಇತ್ತ ಪ್ರಿಯಕರನೂ ಇಲ್ಲದೆ ಕಂಗೆಟ್ಟು ಬೀದಿಪಾಲಾಗಿದೆ. ತನಗೆ ಮೋಸ ಮಾಡಿ ನಾಪತ್ತೆಯಾಗಿರುವ ಪ್ರಿಯಕರನ ಮನೆ ಮುಂದೆ ಬ್ಯಾಗ್ ಸಮೇತ ಬಂದಿರುವ ಮಹಿಳೆ, ಕಳೆದ 10 ದಿನಗಳಿಂದ ನ್ಯಾಯಕ್ಕಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾಳೆ.
‘ಗಂಡನಿಗೆ ಡಿವೋರ್ಸ್ ಕೊಟ್ರೆ ಮದುವೆಯಾಗ್ತೀನಿ ಎಂದಿದ್ದ ಪ್ರಿಯಕರ!’:
ಸಂತ್ರಸ್ತ ಮಹಿಳೆ ಸಂಗೀತಾಗೆ ಈಗಾಗಲೇ ಮದುವೆಯಾಗಿದ್ದು, ನೆಲವಾಡ ಗ್ರಾಮದ ದತ್ತು ಎಂಬ ಯುವಕನೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿ ಹಾಗೂ ರಿಲೇಷನ್ಶಿಪ್ನಲ್ಲಿದ್ದರು. “ನಿನ್ನ ಪತಿಗೆ ವಿಚ್ಛೇದನ ನೀಡಿದರೆ ನಿನ್ನನ್ನು ಮದುವೆಯಾಗುತ್ತೇನೆ” ಎಂದು ದತ್ತು ಆಕೆಗೆ ಭರವಸೆ ನೀಡಿದ್ದನು. ಆತನ ಮಾತುಗಳನ್ನು ಕುರುಡಾಗಿ ನಂಬಿದ ಸಂಗೀತಾ, ತನ್ನ ಪತಿಗೆ ಕಾನೂನಾತ್ಮಕವಾಗಿ ವಿಚ್ಛೇದನ ನೀಡಿದ್ದಳು.

ಗಂಡನಿಗೆ ಡಿವೋರ್ಸ್ ನೀಡಿ ಮದುವೆಯಾಗಲು ಮನೆಗೆ ಬರುವಷ್ಟರಲ್ಲಿ ಪ್ರಿಯಕರ ದತ್ತು ಮದುವೆಗೆ ನಿರಾಕರಿಸಿ ತಲೆಮರೆಸಿಕೊಂಡಿದ್ದಾನೆ. ಅಲ್ಲದೆ ಆತನ ಮನೆಯವರೂ ಸಹ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ನಟಿ ರುಕ್ಮಿಣಿ ವಸಂತ್ ಎಐ ಅಶ್ಲೀಲ ವಿಡಿಯೋ ಕೇಸ್: ಮೂವರು ಕಿಡಿಗೇಡಿಗಳನ್ನು ಬಂಧಿಸಿದ ಸೈಬರ್ ಕ್ರೈಂ ಪೊಲೀಸರು

‘ನನ್ನ ಜೀವಕ್ಕೆ ಏನಾದರೂ ಆದರೆ ಪ್ರಿಯಕರನ ಕುಟುಂಬವೇ ಕಾರಣ!’: ಕಣ್ಣೀರಿಟ್ಟ ಮಹಿಳೆ!
ಪ್ರಿಯಕರನ ಮನೆಯ ಮುಂದೆ ಕಳೆದ 10 ದಿನಗಳಿಂದ ರಾತ್ರಿ-ಹಗಲು ಧರಣಿ ಕುಳಿತಿರುವ ಸಂಗೀತಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಗಂಡನಿಗೆ ಡಿವೋರ್ಸ್ ಕೊಡುವಂತೆ ಮಾಡಿ ಈಗ ಅನ್ಯಾಯ ಮಾಡಿದ್ದಾನೆ. ಪತಿಗೆ ವಿಚ್ಛೇದನ ನೀಡಿ ಬಂದರೂ ನನ್ನನ್ನು ಮನೆಗೆ ಸೇರಿಸಿಕೊಳ್ಳದೆ ಓಡಿಹೋಗಿದ್ದಾರೆ. ಈ ಕೊರೆಯುವ ಚಳಿಯಲ್ಲಿ ನಾನು ಬೀದಿಯಲ್ಲಿ ಕುಳಿತುಕೊಳ್ಳುವಂತಾಗಿದೆ. ನನ್ನ ಜೀವಕ್ಕೆ ಏನಾದರೂ ಅಪಾಯ ಸಂಭವಿಸಿದರೆ ಅದಕ್ಕೆ ಪ್ರಿಯಕರ ದತ್ತು ಹಾಗೂ ಆತನ ಮನೆಯವರೇ ನೇರ ಕಾರಣ,” ಎಂದು ಸಂಗೀತಾ ಆರೋಪಿಸಿದ್ದಾರೆ. ಸ್ಥಳೀಯವಾಗಿ ಈ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


