‘ನಾವು ಹಳ್ಳಿಯವರೇ ಏನಿವಾಗ?’: ಪ್ರಿಯಾಂಕ್ ಖರ್ಗೆ “ವಿಲೇಜ್ ಈಡಿಯಟ್” ಹೇಳಿಕೆಗೆ ಜೆಡಿಎಸ್ ಬ್ರಹ್ಮಾಸ್ತ್ರ

ಬೆಂಗಳೂರು: ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ರಾಜಕೀಯ ಸಮರ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಸ್ಟಿಂಗ್ ಕಾರ್ಯಾಚರಣೆ ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ “ಹೆಚ್‌ಡಿಕೆ ವಿಲೇಜ್ ಈಡಿಯಟ್ (Village Idiot) ರೀತಿ ಆಡ್ತಾರೆ” ಎಂಬ ಹೇಳಿಕೆಯನ್ನೇ ಜೆಡಿಎಸ್ (JDS) ತನ್ನ ರಾಜಕೀಯ ಬ್ರಹ್ಮಾಸ್ತ್ರವನ್ನಾಗಿ ಮಾಡಿಕೊಂಡಿದೆ.

ಪ್ರಿಯಾಂಕ್ ಖರ್ಗೆ ಅವರ ಈ ಹೇಳಿಕೆಯ ವಿರುದ್ಧ ಜೆಡಿಎಸ್ ‘ನಾವು ಹಳ್ಳಿಯವರೇ ಏನಿವಾಗ?’ ಎಂಬ ವಿನೂತನ ಹಾಗೂ ಬೃಹತ್ ಸೋಶಿಯಲ್ ಮೀಡಿಯಾ ಅಭಿಯಾನವನ್ನು ಆರಂಭಿಸಿದ್ದು, ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ನೀಡಿದೆ.

Advertisement

ಜೆಡಿಎಸ್‌ನ ಸಣ್ಣ ಮಟ್ಟದ ಕಾರ್ಯಕರ್ತರಿಂದ ಹಿಡಿದು ಹಿರಿಯ ನಾಯಕರವರೆಗೆ ಪ್ರತಿಯೊಬ್ಬರೂ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ “ನಾವು ಹಳ್ಳಿಯವರೇ, ಏನಿವಾಗ?” ಎಂಬ ಬರಹ ಹಾಗೂ ಪೋಸ್ಟರ್‌ಗಳನ್ನು ಅಪ್‌ಲೋಡ್ ಮಾಡುವ ಮೂಲಕ ಸಚಿವ ಪ್ರಿಯಾಂಕ್ ವಿರುದ್ಧ ಧ್ವನಿ ಎತ್ತಿದ್ದಾರೆ.  ರಾಮನಗರ ತಾಲೂಕಿನ ಬಿಡದಿ ಸೇರಿದಂತೆ ಹಳೆಯ ಮೈಸೂರು ಭಾಗದಲ್ಲಿ “ನಾವು ಹಳ್ಳಿಯವರೇ ಏನಿವಾಗ?” ಎಂಬ ಬೃಹತ್ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿದ್ದು, ಹಳ್ಳಿಗರ ಸ್ವಾಭಿಮಾನಕ್ಕೆ ಸವಾಲೆಸೆದಿದ್ದಾರೆ ಎಂದು ಜೆಡಿಎಸ್ ಆಕ್ರೋಶ ಹೊರಹಾಕಿದೆ.

ಇದನ್ನೂ ಓದಿ: ಆರ್‌ಎಸ್‌ಎಸ್ ಪಥಸಂಚಲನ ಅನುಮತಿ ವಿಚಾರ: ಒಂದೆಡೆ ಅರ್ಜಿ ಹಾಕಿ ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರದಲ್ಲೇ ಗೊಂದಲದ ವಾತಾವರಣ

Advertisement

‘ನಾನು ಹಳ್ಳಿಯವನು ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ’: ಎಚ್‌ಡಿಕೆ ತಿರುಗೇಟು

ಗೃಹ ಸಚಿವರ ‘ವಿಲೇಜ್ ಈಡಿಯಟ್’ ಹೇಳಿಕೆಗೆ ಟ್ವಿಟರ್ (X) ಮೂಲಕ ಖಾರವಾಗಿ ಕೌಂಟರ್ ನೀಡಿರುವ ಹೆಚ್.ಡಿ. ಕುಮಾರಸ್ವಾಮಿ. “ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ಮಹಾತ್ಮ ಗಾಂಧೀಜಿಯವರೇ ಹೇಳಿದ್ದಾರೆ. ನಿಜ, ನಾನು ಹಳ್ಳಿಯವನು. ಹಳ್ಳಿಯಲ್ಲೇ ಹುಟ್ಟಿ, ಹಟ್ಟಿಯ ಮಣ್ಣಿನಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಸದಾ ಹೆಮ್ಮೆ ಇದೆ. ಸಿಟಿಯಲ್ಲೇ ಬೆಳೆದವರಿಗೆ ಹಳ್ಳಿಯ ಮಣ್ಣಿನ ಗುಣ ಮತ್ತು ರೈತರ ಬೆವರಿನ ಬೆಲೆ ತಿಳಿಯುವುದಿಲ್ಲ.”  ಎಂದಿದ್ದಾರೆ.

“ಹೆಚ್.ಡಿ. ಕುಮಾರಸ್ವಾಮಿ ಅವರನ್ನು ‘ಹಳ್ಳಿ ಗುಗ್ಗು’ ಹಾಗೂ ‘ಈಡಿಯಟ್’ ಎಂದು ಜರಿದು ನಿಮ್ಮ ಹೈಟೆಕ್ ಅಹಂಕಾರ ಮತ್ತು ಸಂಸ್ಕಾರವನ್ನು ಪ್ರದರ್ಶಿಸಿದ್ದೀರಿ. ನಿಮ್ಮ ಈ ಅಧಿಕಾರದ ಮದದ ಮಾತುಗಳು ಇಡೀ ದೇಶದ ಹಳ್ಳಿಯ ಮಣ್ಣಿನ ಮಕ್ಕಳಿಗೆ ಹಾಗೂ ರೈತರಿಗೆ ಮಾಡಿದ ಘೋರ ಅಪಮಾನ,” ಎಂದು ಜೆಡಿಎಸ್ ಕಿಡಿಕಾರಿದೆ.  “ಅಪ್ಪನ ಹೆಸರಿನಲ್ಲಿ ಬೆಳೆದು, ದೆಹಲಿ ಹಾಗೂ ಇಟಲಿ ನಾಯಕರ ಕೃಪೆಯಿಂದ ಅಧಿಕಾರ ಪಡೆದಿರುವ ನಿಮಗೆ ಗ್ರಾಮ ವಾಸ್ತವ್ಯ ಮಾಡಿ ಜನರ ಕಣ್ಣೀರು ಒರೆಸಿದ ಹಾಗೂ ಎರಡು ಬಾರಿ ರೈತರ ಸಾಲ ಮನ್ನಾ ಮಾಡಿದ ಹೆಚ್‌ಡಿಕೆ ‘ಗುಗ್ಗು’ ಥರ ಕಾಣಿಸುವುದು ಸಹಜ. ನಾವು ರೈತರ ಪರ ನಿಲ್ಲುವ ಹೆಮ್ಮೆಯ ‘ಹಳ್ಳಿ ಗುಗ್ಗು’ಗಳೇ ಹೊರತು, ನಿಮ್ಮಂತೆ ಬಣ್ಣ ಬದಲಿಸುವ ಕಾರ್ಪೋರೇಟ್ ಓತಿಕ್ಯಾತಗಳಲ್ಲ.”

Advertisement

“ಎಸಿ ಕೊಠಡಿಯಲ್ಲಿ ಕುಳಿತು ಶೋಕಿ ಮಾಡುವ ಇಟಲಿ ಕಾಂಗ್ರೆಸ್‌ನ ಗುಲಾಮರಿಗೆ ಎಲೆಕ್ಷನ್ ಬಂದಾಗ ಇದೇ ‘ಹಳ್ಳಿ ಗುಗ್ಗು’ಗಳ ಮನೆ ಬಾಗಿಲಿಗೆ ವೋಟ್ ಭಿಕ್ಷೆ ಬೇಡಿಕೊಂಡು ಬರಲೇಬೇಕು. ಹಳ್ಳಿಯವರು ಮುಗ್ಧರಿರಬಹುದು, ಆದರೆ ದಡ್ಡರಲ್ಲ. 2028ರ ಚುನಾವಣೆಯಲ್ಲಿ ಇದೇ ಹಳ್ಳಿಗರು ನಿಮ್ಮನ್ನು ಮತ್ತು ನಿಮ್ಮ ಕಾಂಗ್ರೆಸ್ ಪಕ್ಷವನ್ನು ತಿಪ್ಪೆಗುಂಡಿಗೆ ಎಸೆಯಲಿದ್ದಾರೆ,” ಎಂದು ಜೆಡಿಎಸ್ ಭವಿಷ್ಯ ನುಡಿದಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ