ರಾಜ್ಯ ಸರ್ಕಾರ ಆರಂಭಿಸಿರುವ ‘ನಮ್ಮ ಶಾಲೆ, ನನ್ನ ಜವಾಬ್ದಾರಿ’ ಎಂಬ ಉಪಕ್ರಮದ ಅಡಿಯಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳು ಮತ್ತು ಕಾರ್ಪೊರೇಟ್ ವಲಯದ ಸಹಭಾಗಿತ್ವ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಹೇಳಿದ್ದಾರೆ. ಯಾಕೆ ಮುಖ್ಯಮಂತ್ರಿಗಳೆ ಸರ್ಕಾರಿ ಶಾಲೆ ಅಭಿವೃದ್ಧಿಗೆ ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲವೇ? ಗ್ಯಾರಂಟಿಗಳಿಗೆ ಸುರಿದು ಖಜಾನೆ ಖಾಲಿಯಾಗಿದೆಯೇ? ಅಥವಾ ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ನೀಡಿ ಕಮಿಷನ್ ಪಡೆಯುವ ಹುನ್ನಾರವೇ? ದಯವಿಟ್ಟು ಉತ್ತರ ನೀಡಿ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಕಂಪನಿಗಳ ಹೂಡಿಕೆ ಬಯಸುತ್ತಿದ್ದರೆ, ಮಗಳು ಶ್ರೀಮತಿ ಐಶ್ವರ್ಯ ಡಿ ಕೆ ಶಿವಕುಮಾರ್ ಹೂಡಿಕೆ ಮಾಡಿ ಹೇಗೆ ಶಾಲೆಯನ್ನು ಸಂಪೂರ್ಣ ತಮ್ಮ ಕೈವಶ ಮಾಡಿಕೊಳ್ಳಬೇಕೆಂದು Idea ನೀಡುತ್ತಿದ್ದಾರೆ. ಆದರೆ, ಬೆಂಗಳೂರಿನಲ್ಲಿ ನಡೆದ ನನ್ನ ಶಾಲೆ ನನ್ನ ಜವಾಬ್ದಾರಿ ಎಂಬ ಸರ್ಕಾರಿ ಕಾರ್ಯಕ್ರಮದಲ್ಲಿ ಶ್ರೀಮತಿ ಐಶ್ವರ್ಯ ಡಿ ಕೆ ಶಿವಕುಮಾರ್ ಸರ್ಕಾರಿ ಶಾಲೆ ಮತ್ತು ಶಾಲೆಯ ಶಿಕ್ಷಕರ ಬಗ್ಗೆ ಆಡಿದ ಕೇವಲದ ಮಾತುಗಳು ಕೆರಳಿಸುತ್ತವೆ.

ಶ್ರೀಮತಿ ಐಶ್ವರ್ಯ ಡಿ ಕೆ ಶಿವಕುಮಾರ್ ಹೇಳುತ್ತಾರೆ, ಶಾಲೆಗಳಲ್ಲಿ ಶಿಕ್ಷಕರ ಅಭಾವಕ್ಕಿಂತ ಹೆಚ್ಚಾಗಿ ಕಾರ್ಯಕ್ಷಮತೆ (Efficiency) ಮತ್ತು ಹೊಣೆಗಾರಿಕೆಯ ಕೊರತೆಯಿದೆ. ಲಕ್ಷಾಂತರ ಸಂಬಳ ಪಡೆಯುವ ಕೆಲ ಶಿಕ್ಷಕರು ವಾರದಲ್ಲಿ ಐದು ದಿನ ಸರಿಯಾಗಿ ಶಾಲೆಗೆ ಬರುವುದಿಲ್ಲ. ಜೊತೆಗೆ ವಿದ್ಯಾರ್ಥಿನಿಯರಿಗೆ ಶೌಚಾಲಯ, ನೈರ್ಮಲ್ಯ ಹಾಗೂ ಕನಿಷ್ಠ ಸೌಲಭ್ಯಗಳಿರಲಿಲ್ಲ ಎಂದು ಹೇಳಿದ್ದಾರೆ.
ಶಿಕ್ಷಣ ತಜ್ಞೆ ಅಂತ ಹೇಳಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ನನ್ನ ಸರ್ಕಾರಿ ಶಾಲೆ ಶಿಕ್ಷಕರ ಬಗ್ಗೆ ಮಾತನಾಡುತ್ತಿರಲ್ಲ, ತಂದೆ ಕಟ್ಟಿಸಿಕೊಟ್ಟ 2-3 ಶಾಲೆಗಳನ್ನು ನಡೆಸಿಕೊಂಡು ಹೋಗುತ್ತಿರುವ ಮಾತ್ರಕ್ಕೆ ನೀವು ಶಿಕ್ಷಣ ತಜ್ಞೆ ಆಗುತ್ತೀರಾ?

ಶಿಕ್ಷಕರ ಕೊರತೆ ಬಗ್ಗೆ ಮಾತನಾಡುತ್ತೀರಿ, ನಿಜ ಶಿಕ್ಷಕರ ಕೊರತೆ ಇದೆ. ಶಿಕ್ಷಕರನ್ನು ನೇಮಕ ಮಾಡಬೇಕಾಗಿದ್ದು ನಿಮ್ಮ ತಂದೆಯವರ ಸರ್ಕಾರ. ಅದನ್ನು ಅವರಿಗೆ ಮನಮುಟ್ಟುವಂತೆ ಹೇಳಿ. ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ 58 ಸಾವಿರ ಹುದ್ದೆ ಖಾಲಿ ಇವೆ. ಪ್ರಾಥಮಿಕ ಶಾಲೆಗಳಲ್ಲಿ 45,179 ಹುದ್ದೆ ಹಾಗೂ ಪ್ರೌಢ ಶಾಲೆಗಳಲ್ಲಿ 13045 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡಿದರೆ ಆಗ ಶಾಲೆಗಳು ತಾನಾಗಿಯೇ ಅಭಿವೃದ್ಧಿಯಾಗುತ್ತವೆ.

ಶಿಕ್ಷಕರಿಗೆ ಕಾರ್ಯಕ್ಷಮತೆ ಇಲ್ಲ:
ಸರ್ಕಾರ ಶಿಕ್ಷಕರಿಗೆ ಸರಿಯಾಗಿ ಕೆಲಸ ಮಾಡಲು ಬಿಟ್ಟರೆ ತಾನೆ ಕಾರ್ಯಕ್ಷಮತೆ ಬರಲು ಸಾಧ್ಯ. ಮೊಟ್ಟೆ ಲೆಕ್ಕ ಕೊಡಿ, ಚಿಕ್ಕಿ ಲೆಕ್ಕ ಕೊಡಿ, ಜಾತಿ ಗಣತಿ, ಚುನಾವಣೆ, ಎಸ್ಐಆರ್ ಹೀಗೆ ಅವರಿಂದ ಬೇರೆ ಬೇರೆ ಕೆಲಸಗಳನ್ನು ತೆಗೆದುಕೊಳ್ಳುತ್ತಿದ್ದರೆ ಅವರು ಪಾಠ ಮಾಡುವುದಾದರೂ ಯಾವಾಗ? ಸರಿಯಾಗಿ ತರಗತಿಗಳು ನಡದರೆ ತಾನೆ ಆಗ ಅವರಿಗೆ ವೃತ್ತಿಯಲ್ಲಿ ಕಾರ್ಯಕ್ಷಮತೆ ತಾನಾಗಿಯೇ ಬರುವುದು.
ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚಲು ಶಿಕ್ಷಕರೇ ಕಾರಣ ಎಂಬ ದಾಟಿಯಲ್ಲಿ ಮಾತನಾಡುತ್ತಿದ್ದೀರಿ, ನಿಮ್ಮ ತಂದೆಯವರ ಸರ್ಕಾರ ಸರಿಯಾಗಿ ಮೂಲಭೂತ ಸೌಕರ್ಯ ನೀಡಿದ್ದರೇ, ಖಾಲಿ ಇರುವ ಎಲ್ಲ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಿದ್ದರೆ ಸರ್ಕಾರಿ ಶಾಲೆಗಳ ಪರಿಸ್ಥಿತಿ ಈ ರೀತಿ ಇರುತ್ತಿರಲ್ಲಿಲ್ಲ. ನೀವು ಮಾತನಾಡುವುದು ಕೂಡ ತಪ್ಪುತ್ತಿತ್ತು.
ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಧಮಾಕಾ ಗಿಫ್ಟ್: ತುಟ್ಟಿ ಭತ್ಯೆ ಏರಿಕೆ
ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಾರೆ, ಸರಿಯಾಗಿ ಐದು ದಿನ ಶಾಲೆಗೆ ಬರುವುದಿಲ್ಲ ಅನ್ನುತ್ತಿರಿ, ನೀವು ನಡೆಸುವ ಶಾಲೆಗಳ ಶಿಕ್ಷಕರ ರೀತಿ ಅವರಲ್ಲ. ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ ರ್ಯಾಂಕ್ ಪಡೆದು ಆ ಹುದ್ದೆಗೆ ಬಂದಿದ್ದಾರೆ. ಇಂತವರಿಗೆ ನೀವು ವೇತನ ನೀಡದೆ ಮತ್ಯಾರಿಗೆ ನೀಡುತ್ತಿರಿ?
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯ, ನೈರ್ಮಲ್ಯ ಹಾಗೂ ಕನಿಷ್ಠ ಸೌಲಭ್ಯಗಳಿರಲಿಲ್ಲ. ಕಸ ಹಾಕಲು ಕಸದ ಬುಟ್ಟಿಗಳಲ್ಲಿ: ಶಾಲೆಗಳಿಗೆ ಕಸದ ಬುಟ್ಟಿಯನ್ನು ನಿಮ್ಮ ತಂದೆಯವರ ಸರ್ಕಾರ ನೀಡಿದ್ದರೇ, ಅಲ್ಲಿ ಇರುತ್ತಿದ್ದವು. ಇನ್ನು, ಶಾಲೆಗಳಲ್ಲಿ ನೈರ್ಮಲ್ಯ ಕಾಪಾಡಲು ಸರ್ಕಾರ ಸಾಕಾಗುವಷ್ಟು ಸಿಬ್ಬಂದಿಗಳನ್ನು ನೇಮಕ ಮಾಡಿದ್ದರೇ ಶಾಲೆಗಳು ಸ್ವಚ್ಛವಾಗಿಯೇ ಇರುತ್ತಿದ್ದವು. ಅದಕ್ಕೆ, ಎಷ್ಟು ಸಿಬ್ಬಂದಿಗಳನ್ನು ನೇಮಕ ಮಾಡಿದ್ದಿರಿ ಎಂದು ನಿಮ್ಮ ತಂದೆಯವರಿಗೆ ಕೇಳಿ, ಉತ್ತರ ಪಡೆಯಿರಿ, ಅಂಕಿ-ಅಂಶ ಬಹಿರಂಗ ಪಡಿಸುವಂತೆ ಹೇಳಿ.
ಮಕ್ಕಳು ಬೆಳಗ್ಗೆ ತಿಂಡಿ ಮಾಡದೆ ಶಾಲೆಗಳಿಗೆ ನಡೆದುಕೊಂಡು ಬರುತ್ತಾರೆ. ಅವರಿಗೆ ಬಸ್ ಸೌಲಭ್ಯ ಇಲ್ಲ, ಅದಕ್ಕೆ ಪ್ರತಿ ಸರ್ಕಾರಿ ಶಾಲೆಗೆ 1-2 ಬಸ್ ಇರಬೇಕು ಅನ್ನುತ್ತಿರಿ. ಸರಿ ಇದೆ ನೀವು ಹೇಳಿದ್ದು. ಇಷ್ಟೆಲ್ಲ ತೊಂದರೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಇದ್ದ ಸರ್ಕಾರಿ ಬಸ್ಗಳನ್ನೇ ಸಮಯದ ಸರಿಯಾಗಿ ಓಡಿಸಿದರೆ ಸಾಕು, ಮಕ್ಕಳು ಆರಾಮವಾಗಿಯೇ ಶಾಲೆಗಳಿಗೆ ಬರುತ್ತಾರೆ. ಇದನ್ನು ನಿಮ್ಮ ತಂದೆಯವರಿಗೆ ಹೇಳಿ. ಗ್ಯಾರಂಟಿ ನೀಡಿ, ಸರ್ಕಾರಿ ಬಸ್ಗಳನ್ನು ಓಡಿಸಲು ಹಣದ ಕೊರತೆ ಉಂಟಾಗಿ ಬಸ್ಗಳನ್ನು ಕಡಿಮೆ ಮಾಡಿದ್ದು, ನಿಮ್ಮ ತಂದೆಯವರ ಸರ್ಕಾರ.
ಸರ್ಕಾರಿ ಶಾಲೆಗಳು ಸುಸಜ್ಜಿತವಾಗಿರಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸರ್ಕಾರಿ ಶಾಲೆಗೆ ಬರಬೇಕು ಎಂದು ಹೇಳುವುದು ಸರಿ ಇದೆ. ಆದರೆ, ಈ ರೀತಿಯಾಗಿ ಮಾಡಬೇಕಾಗಿದ್ದು, ಸರ್ಕಾರ ಹೊರತು, ಶಿಕ್ಷಕರಲ್ಲ. ಬಹಿರಂಗ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ದೂರುವುದನ್ನು ಬಿಡಿ. ಸರ್ಕಾರಿ ಶಾಲೆ ಶಿಕ್ಷಕರ ಬಗ್ಗೆ ಮಾತನಾಡುವುದಕ್ಕೆ ನಿಮಗೆ ಯಾವ ನೈತಿಕತೆ ಇದೆ ಐಶ್ವರ್ಯ, daughter of D K Shivakumar?
ಲೇಖಕರು: ವಿವೇಕ ಬಿರಾದಾರ, ಹುಬ್ಬಳ್ಳಿ

