ಶಹಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಇಬ್ರಾಹಿಂ ಡಿಬಿಎಲ್ (DBL) ಕ್ಯಾಂಪ್ ಬಳಿ ನಿರ್ಮಾಣ ಹಂತದ ಎಕ್ಸ್‌ಪ್ರೆಸ್ ವೇಯಲ್ಲಿ ಶುಕ್ರವಾರ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಯುವಕರನ್ನು ಗುರುರಾಜ್ ಚವ್ಹಾಣ್ (35), ರೆಡ್ಡಿ ರಾಠೋಡ್ (33), ಗೋವಿಂದ ಚವ್ಹಾಣ್ (28) ಮತ್ತು ಕುಮಾರ್ ರಾಠೋಡ್ (26) ಎಂದು ಗುರುತಿಸಲಾಗಿದೆ. ಮೃತರಲ್ಲಿ ಮೂವರು ಮಲ್ಹಾರ್ ತಾಂಡಾದ ನಿವಾಸಿಗಳಾಗಿದ್ದು, ಮತ್ತೋರ್ವ ಲಿಂಗೇರಿ ತಾಂಡಾದ ಯುವಕ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಯುವಕರೆಲ್ಲರೂ ಕಲಬುರಗಿ ಜಿಲ್ಲೆಯ ಜೇವರ್ಗಿಯಿಂದ ಯಾದಗಿರಿ ಕಡೆಗೆ ಕಾರಿನಲ್ಲಿ ಹೊರಟಿದ್ದರು. ನಿರ್ಮಾಣ ಹಂತದಲ್ಲಿರುವ ಚೆನ್ನೈ-ಸೂರತ್ ಎಕ್ಸ್‌ಪ್ರೆಸ್ ವೇನಲ್ಲಿ ಸಾಗುತ್ತಿದ್ದಾಗ, ಅತಿಯಾದ ವೇಗದಲ್ಲಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ತಡೆಗೋಡೆಗೆ (Crash Barrier) ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಜಜ್ಜುಗುಜ್ಜಾಗಿದ್ದು, ಒಳಗೆ ಪ್ರಯಾಣಿಸುತ್ತಿದ್ದ ನಾಲ್ವರೂ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ನವವಧುವಿನ ನಿಗೂಢ ಸಾವು: ಅಪಘಾತವೋ? ಕೊಲೆಯೋ?: ಹೋಟೆಲ್ ಸಿಸಿಟಿವಿ ದೃಶ್ಯಾವಳಿ ವೈರಲ್
ಅಪಘಾತದ ವಿಷಯ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪೃಥ್ವಿಕ್ ಶಂಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ದುರಂತಕ್ಕೆ ಸಂಬಂಧಿಸಿದಂತೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಮುಂದುವರಿಸಲಾಗಿದೆ.



