ಪಟಾಕಿ ಸಿಡಿಸಿದ್ರೆ ರೋಗಗಳು ಗುಣವಾಗುತ್ತೆ: ಬಿಜೆಪಿ ಶಾಸಕಿ ವಿವಾದಾತ್ಮಕ ಹೇಳಿಕೆ

ಕೋಲ್ಕತ್ತಾ: “ಪಟಾಕಿ ಸಿಡಿಸುವುದರಿಂದ ಹಲವು ರೋಗಗಳು ಗುಣವಾಗುತ್ತವೆ!” ಎನ್ನುವ ವಿಚಿತ್ರ ಹಾಗೂ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕೋಲ್ಕತ್ತಾದ ಟಾಲಿಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಬಳಸುವಂತೆ ಹಾಗೂ ಶಬ್ದ ಮಾಲಿನ್ಯ ನಿಯಮಗಳನ್ನು ಪಾಲಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂಧು ಅಧಿಕಾರಿ ಅವರು ಜನರಲ್ಲಿ ಸರಣಿ ಮನವಿ ಮಾಡುತ್ತಿರುವ ಬೆನ್ನಲ್ಲೇ, ಆಡಳಿತ ಪಕ್ಷದ ಶಾಸಕಿಯೇ ನೀಡಿರುವ ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ.

ಕೋಲ್ಕತ್ತಾದ ಟಾಲಿಗಂಜ್ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಕಾಳಿ ಪೂಜಾ ಮಂಟಪದ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕಿ ಪಾಪಿಯಾ ಅಧಿಕಾರಿ. “ನಾವು ಪಟಾಕಿ ಸಿಡಿಸಿಯೇ ಸಿಡಿಸುತ್ತೇವೆ. ಪಟಾಕಿಗಳನ್ನು ಸಿಡಿಸುವುದರಿಂದ ಅನೇಕ ರೋಗಗಳು ಗುಣವಾಗುತ್ತವೆ ಎಂಬುದನ್ನು ನೀವು ಮುಂದೆ ನೋಡುತ್ತೀರಿ” ಎಂದು ಸಾರ್ವಜನಿಕ ವೇದಿಕೆಯಲ್ಲಿ ಸಮರ್ಥಿಸಿಕೊಂಡರು. ಅದೇ ವೇಳೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ, “ಗೌರವಾನ್ವಿತ ಮುಖ್ಯಮಂತ್ರಿಗಳು ಕಾಳಿ ಪೂಜಾ ಹಬ್ಬದ ಸಮಯದಲ್ಲಿ ಪಟಾಕಿ ಸಿಡಿಸಲು ಅನುಮತಿ ನೀಡಿದ್ದಾರೆ. ಆದರೆ ಅದು ಸರ್ಕಾರ ಮತ್ತು ಪೊಲೀಸ್ ಠಾಣೆಗಳು ರೂಪಿಸಿರುವ ನಿಯಮ ಹಾಗೂ ನಿರ್ಬಂಧಗಳಿಗೆ ಬದ್ಧವಾಗಿರಬೇಕು. ಆದರೆ ಪಟಾಕಿಗಳು ರೋಗಗಳನ್ನು ಗುಣಪಡಿಸುತ್ತವೆ ಎನ್ನುವುದು ನಿರಾಕರಿಸಲಾಗದ ಸತ್ಯ” ಎಂದರು.

Advertisement

ಇದನ್ನೂ ಓದಿ: ಸೈನಿಕರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಸಂಭ್ರಮ

ವಿಶೇಷವೆಂದರೆ, ಶಾಸಕಿ ಪಾಪಿಯಾ ಅಧಿಕಾರಿ ಅವರು ವೇದಿಕೆ ಮೇಲೆ ನಿಂತು ಈ ಭಾಷಣ ಮಾಡುತ್ತಿದ್ದ ಸಮಯದಲ್ಲೇ, ಕಾರ್ಯಕ್ರಮದ ಆವರಣದಲ್ಲಿ ಭಾರಿ ಶಬ್ದದೊಂದಿಗೆ ಪಟಾಕಿಗಳನ್ನು ಸಿಡಿಸಲಾಗುತ್ತಿತ್ತು. ಕಳೆದ ಕೆಲವು ದಿನಗಳಿಂದ ಕೋಲ್ಕತ್ತಾ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕಾಳಿ ಪೂಜಾ ಕಾರ್ಯಕ್ರಮಗಳ ಅನಾವರಣದಲ್ಲಿ ಭಾಗವಹಿಸುತ್ತಿರುವ ಮುಖ್ಯಮಂತ್ರಿ ಸುವೇಂಧು ಅಧಿಕಾರಿ, ಹಬ್ಬದ ಸಂಭ್ರಮದಲ್ಲಿ ಶಬ್ದ ಮಾಲಿನ್ಯದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಸರ್ಕಾರಿ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ ಹಸಿರು ಪಟಾಕಿಗಳನ್ನಷ್ಟೇ ಬಳಸಬೇಕು ಎಂದು ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಸ್ವತಃ ಆಡಳಿತ ಪಕ್ಷದ ಶಾಸಕಿಯೇ “ಪಟಾಕಿಯಿಂದ ರೋಗ ವಾಸಿಯಾಗುತ್ತದೆ” ಎನ್ನುವ ವೈಜ್ಞಾನಿಕ ಆಧಾರವಿಲ್ಲದ ಹೇಳಿಕೆ ನೀಡಿರುವುದು ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement