ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್​​ನ್ನು ಜಗತ್ತಿನ ಮುಂದೆ ಬೆತ್ತಲೆ ಮಾಡಿದ ಚೀನಾ ಸುಂದರಿ

ವಾಷಿಂಗ್ಟನ್ : ವಿಶ್ವದ ಅತ್ಯಂತ ದೊಡ್ಡ ಚಿಪ್ ತಯಾರಿಕಾ ಸಂಸ್ಥೆಯಾದ ಎನ್‌ವಿಡಿಯಾ  ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಹ-ಸಂಸ್ಥಾಪಕ ಜೆನ್ಸನ್ ಹುವಾಂಗ್  ಅವರ ಸುತ್ತ ಸುತ್ತಿಕೊಂಡಿರುವ ದಾಂಪತ್ಯೇತರ ಸಂಬಂಧ ಹಾಗೂ ಚೀನಾ ಗೂಢಚರ್ಯೆಯ ಶಂಕೆಯ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸಿದೆ. ನ್ಯೂಯಾರ್ಕ್ ಮೂಲದ ಖ್ಯಾತ ಕಾನೂನು ಸಂಸ್ಥೆ ‘ವಾಚ್ಟೆಲ್, ಲಿಪ್ಟನ್, ರೋಸೆನ್ & ಕ್ಯಾಟ್ಜ್’  ಅನ್ನು ಈ ನಿಷ್ಪಕ್ಷಪಾತ ತನಿಖೆಗೆ ನೇಮಿಸಲಾಗಿದ್ದು, ಎನ್‌ವಿಡಿಯಾ ಆಡಳಿತ ಮಂಡಳಿಗೆ ಇದು ವರದಿ ಸಲ್ಲಿಸಲಿದೆ.

ಜೆನ್ಸನ್ ಹುವಾಂಗ್ ಅವರು ಆಲಿಸ್ ಹುವಾಂಗ್ ಎಂಬ ಉದ್ಯಮಿಯೊಂದಿಗೆ ದಾಂಪತ್ಯೇತರ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಆಲಿಸ್ ಹುವಾಂಗ್ ಚೀನಾದ ಗೂಢಚಾರಿಣಿ  ಆಗಿರಬಹುದು ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಶಂಕಿಸಿರುವುದು ಈ ಪ್ರಕರಣವನ್ನು ಜಾಗತಿಕ ಮಟ್ಟದಲ್ಲಿ ಗಂಭೀರವಾಗಿಸಿದೆ. ನ್ಯೂಯಾರ್ಕ್‌ನ ಮಾಜಿ ಕಾರ್ಯಕಾರಿ ಯುಎಸ್ ಅಟಾರ್ನಿ ಹಾಗೂ ಖ್ಯಾತ ವಕೀಲ ಜೂನ್ ಹೆಚ್. ಕಿಮ್  ಈ ತನಿಖೆಯ ನೇತೃತ್ವ ವಹಿಸಲಿದ್ದಾರೆ. ಇವರು ಈ ಹಿಂದೆ ನ್ಯೂಯಾರ್ಕ್‌ನ ಮಾಜಿ ಗವರ್ನರ್ ಆಂಡ್ರ್ಯೂ ಕುವೋಮೊ ಅವರ ಲೈಂಗಿಕ ಕಿರುಕುಳ ಪ್ರಕರಣದ ತನಿಖೆಯನ್ನು ಯಶಸ್ವಿಯಾಗಿ ನಡೆಸಿದ್ದರು.

Advertisement

ರಾಷ್ಟ್ರೀಯ ಭದ್ರತೆ ಅಥವಾ ಕಂಪನಿಯ ರಹಸ್ಯ ಮಾಹಿತಿಗಳು ಸೋರಿಕೆಯಾಗಿವೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ, ಆದಾಗ್ಯೂ ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಮಂಡಳಿ ಪರಿಶೀಲಿಸಲಿದೆ. ಸಿಇಒ ಜೆನ್ಸನ್ ಹುವಾಂಗ್ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಎನ್‌ವಿಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ಚೀನಾ ಸರ್ಕಾರ ಈ ಗೂಢಚರ್ಯೆಯ ಆರೋಪಗಳನ್ನು ತಳ್ಳಿಹಾಕಿದೆ. ಜೆನ್ಸನ್ ಹುವಾಂಗ್ ಅವರ ಪ್ರಕರಣದ ಬೆನ್ನಲ್ಲೇ ಎನ್‌ವಿಡಿಯಾಗೆ ಶೇರ್‌ಹೋಲ್ಡರ್‌ಗಳಿಂದ ಹೊಸ ಕಾನೂನು ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ವಿದೇಶಿಗರ ಮೇಲಿನ ಸಣ್ಣಪುಟ್ಟ ಕ್ರಿಮಿನಲ್ ಕೇಸ್​​ಗಳು ವಾಪಸಾತಿ: 365 ವಿದೇಶಿಯರ ಡಿಪೋರ್ಟ್‌ಗೆ ಪ್ರಾಸಿಕ್ಯೂಷನ್ ಇಲಾಖೆ ಚಾಲನೆ

Advertisement

 ಹೂಡಿಕೆದಾರರು ಎನ್‌ವಿಡಿಯಾ ಹಾಗೂ ಸಿಇಒ ಜೆನ್ಸನ್ ಹುವಾಂಗ್ ವಿರುದ್ಧ ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಜೆನ್ಸನ್ ಹುವಾಂಗ್ ಅವರ ಸಂಬಂಧ ಮತ್ತು ಚೀನಾ ಗೂಢಚರ್ಯೆಯ ಅಪಾಯಗಳ ಕುರಿತು ಕಂಪನಿಯು ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿ ವಂಚಿಸಿದೆ ಎಂದು ಆರೋಪಿಸಲಾಗಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಅಭಿವೃದ್ಧಿಗೆ ಬಳಕೆಯಾಗುವ ಎನ್‌ವಿಡಿಯಾದ ಮೈಕ್ರೋಚಿಪ್‌ಗಳ ಮೇಲೆ ಅಮೆರಿಕ ಸರ್ಕಾರ ಚೀನಾಕ್ಕೆ ರಫ್ತು ನಿರ್ಬಂಧ ಹೇರಿದೆ. ಆದರೆ ಬೆಂಕಿ ಇಲ್ಲದೆ ಹೊಗೆಯಾಡದು ಎಂಬಂತೆ, ಚೀನಾ ಸರ್ಕಾರ ಇಂತಹ ಅನೈತಿಕ ದಾರಿಗಳ ಮೂಲಕ ಎನ್‌ವಿಡಿಯಾದ ತಂತ್ರಜ್ಞಾನವನ್ನು ಪಡೆಯಲು ಯತ್ನಿಸುತ್ತಿದೆಯೇ ಎಂಬ ಭೀತಿ ಅಮೆರಿಕದ ಭದ್ರತಾ ವಲಯವನ್ನು ಕಾಡುತ್ತಿದೆ. ಹುವಾಂಗ್ ಅವರ ಪ್ರಕರಣ ಹಾಗೂ ಮೆಗಾಸ್ಪೀಡ್ (Megaspeed) ಕಂಪನಿಯೊಂದಿಗಿನ ಬಾಂಧವ್ಯದ ಕುರಿತು ಕಂಪನಿ ಸುಳ್ಳು ಹೇಳಿಕೆಗಳನ್ನು ನೀಡಿ ಎನ್‌ವಿಡಿಯಾದ ಮಾರುಕಟ್ಟೆ ಮೌಲ್ಯಕ್ಕೆ ಧಕ್ಕೆ ತಂದಿದೆ ಎಂದು ಶೇರ್‌ಹೋಲ್ಡರ್‌ಗಳ ದೂರಿನಲ್ಲಿ ಆರೋಪಿಸಲಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement