ಕಿವೀಸ್ ನಾಡಿನಲ್ಲಿ ಎಡಗೈ ವೇಗಿ ಅರ್ಷದೀಪ್ ಸಿಂಗ್ ರೊಮ್ಯಾಂಟಿಕ್ ಪ್ರಪೋಸ್

ವೆಲ್ಲಿಂಗ್ಟನ್: ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಹಾಗೂ ನಟಿ-ಮಾಡಲ್ ಸಮ್ರೀನ್ ಕೌರ್  ನ್ಯೂಜಿಲೆಂಡ್‌ನಲ್ಲಿ ನವೆಂಬರ್ 11ರಂದು ನಿಶ್ಚಿತಾರ್ಥ  ಮಾಡಿಕೊಂಡಿದ್ದಾರೆ. ಐಪಿಎಲ್ 2027ರ ಸೀಸನ್‌ಗೆ ಮುನ್ನ ಪಂಜಾಬ್ ಕಿಂಗ್ಸ್‌ ಸಂಸ್ಥೆಯಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಬೃಹತ್ ಟ್ರೇಡಿಂಗ್ ಮೂಲಕ ಸೇರ್ಪಡೆಯಾದ ಕೇವಲ ಕೆಲವೇ ಗಂಟೆಗಳಲ್ಲಿ ಅರ್ಷದೀಪ್ ತಮ್ಮ ನಿಶ್ಚಿತಾರ್ಥದ ಶುಭ ಸುದ್ದಿಯನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಸಮ್ರೀನ್ ಕೌರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅರ್ಷದೀಪ್ ಸಿಂಗ್ ತಮಗೆ ಉಂಗುರ ತೊಡಿಸುತ್ತಿರುವ ಸುಂದರ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಎಂಗೇಜ್‌ಮೆಂಟ್ ವಿಚಾರವನ್ನು ಅಧಿಕೃತಗೊಳಿಸಿದ್ದಾರೆ. “ಜೀವನ ನಮಗೆ ನೀಡಬಹುದಾದ ಎಲ್ಲಾ ವಸ್ತುಗಳಲ್ಲಿ, ಪರಸ್ಪರ ನಮಗೆ ನಾವೇ ಸಿಕ್ಕಿರುವುದು ಅತ್ಯಂತ ಸಂತೋಷದ ವಿಷಯ. ಜೀವನಪೂರ್ತಿ ಒಂದಾಗಿರಲು.. 11.11.2026 (ಹೈ ಫಿಯಾನ್ಸೆ)” ಎಂದು ಸಮ್ರೀನ್ ಬರೆದುಕೊಂಡಿದ್ದಾರೆ.  ಪ್ರಸ್ತುತ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಏಕದಿನ (ODI) ಸರಣಿಯಲ್ಲಿ ಪಾಲ್ಗೊಂಡಿದ್ದು, ಅರ್ಷದೀಪ್ ಈ ಸರಣಿಯ ಭಾಗವಾಗಿದ್ದಾರೆ. ಸಮ್ರೀನ್ ಕೌರ್ ಸಹ ಅವರೊಂದಿಗೆ ನ್ಯೂಜಿಲೆಂಡ್‌ಗೆ ತೆರಳಿದ್ದಾರೆ.

Advertisement

ಜಮ್ಮು ಮತ್ತು ಕಾಶ್ಮೀರ ಮೂಲದ ಸಮ್ರೀನ್ ಕೌರ್ ಖ್ಯಾತ ಮಾಡಲ್, ನಟಿ ಹಾಗೂ ಸೋಶಿಯಲ್ ಮೀಡಿಯಾ ಪ್ರಭಾವಿ (Influencer). 2018ರ ‘ಫೆಮಿನಾ ಮಿಸ್ ಇಂಡಿಯಾ’ ಸ್ಪರ್ಧೆಯಲ್ಲಿ ಜಮ್ಮು-ಕಾಶ್ಮೀರವನ್ನು ಪ್ರತಿನಿಧಿಸಿ ಫೈನಲ್ ಹಂತ ತಲುಪಿದ್ದರು. ರಣವೀರ್ ಸಿಂಗ್ ಅಭಿನಯದ ಹಿಟ್ ಸಿನಿಮಾ ’83’, ಝೀ5 ವೆಬ್ ಸರಣಿ ‘ನೇಲ್ ಪಾಲಿಶ್’ ಹಾಗೂ ಪಂಜಾಬಿ ಸಿನಿಮಾ ‘ಸರ್ದಾರ್ ಜಿ 2’ ನಲ್ಲಿದ್ದಾರೆ. ಗುರು ರಾಂಧವಾ, ಬಾದ್‌ಶಾ ಹಾಗೂ ಜುಬಿನ್ ನೌಟಿಯಾಲ್ ಅವರ ಹಲವು ಪ್ರಸಿದ್ಧ ಮ್ಯೂಸಿಕ್ ವೀಡಿಯೋಗಳಲ್ಲೂ ನಟಿಸಿದ್ದಾರೆ.

ಇದನ್ನೂ ಓದಿ: ಟೀಮ್‌ ಇಂಡಿಯಾಗೆ ಶಾಕ್: ನ್ಯೂಜಿಲೆಂಡ್ ವಿರುದ್ಧದ 3ನೇ T20 ಪಂದ್ಯದಿಂದಲೂ ಇಶಾನ್ ಕಿಶನ್ ಔಟ್

Advertisement

ಐಪಿಎಲ್ 2026ರ ಪಂದ್ಯಗಳ ವೇಳೆ ಪಂಜಾಬ್ ಕಿಂಗ್ಸ್ ತಂಡವನ್ನು ಬೆಂಬಲಿಸಲು ಸಮ್ರೀನ್ ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಾಗ ಇವರ ಪ್ರೇಮ ವಿಚಾರದ ವದಂತಿಗಳು ಕಾಡ್ಗಿಚ್ಚಿನಂತೆ ಹಬ್ಬಿದ್ದವು. ಧರ್ಮಶಾಲಾದಲ್ಲಿ ಇಬ್ಬರೂ ಕೈಕೈ ಹಿಡಿದು ನಡೆಯುತ್ತಿದ್ದ ವೀಡಿಯೋ ವೈರಲ್ ಆಗಿತ್ತು. ಬಳಿಕ ಜುಲೈ 26, 2026ರಂದು ಅರ್ಷದೀಪ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸಮ್ರೀನ್ ಜೊತೆಗಿನ ಫೋಟೋ ಹಂಚಿಕೊಂಡು “ಮೈ ಪರ್ಸನ್” (My Person) ಎಂದು ಬರೆಯುವ ಮೂಲಕ ತಮ್ಮ ಪ್ರೀತಿಯನ್ನು ಜಗತ್ತಿಗೆ ಅಧಿಕೃತವಾಗಿ ಸಾರಿದ್ದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement