“ಯಾವ ಮುಖ ಹೊತ್ತು ಅಯೋಧ್ಯೆಗೆ ಹೋಗುತ್ತೀಯಾ?”: ಅಖಿಲೇಶ್ ಯಾದವ್ ವಿರುದ್ಧ ಗುಡುಗಿದ ಅಸಾದುದ್ದೀನ್ ಓವೈಸಿ

ಲಖನೌ: ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ರಾಜ್ಯದ ರಾಜಕೀಯ ಕಣದಲ್ಲಿ ಹೊಸ ಸಮೀಕರಣಗಳು ಮತ್ತು ತೀವ್ರ ರಾಜಕೀಯ ಚರ್ಚೆಗಳು ಗರಿಗೆದರಿವೆ. ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ನೇತೃತ್ವದ ಎಐಎಂಐಎಂ (AIMIM) ಹಾಗೂ ನಗೀನಾ ಲೋಕಸಭಾ ಸಂಸದ ಚಂದ್ರಶೇಖರ್ ಆಜಾದ್ (Chandrashekhar Azad) ಅವರ ಆಜಾದ್ ಸಮಾಜ ಪಕ್ಷ (ASP) ನಡುವೆ ಚುನಾವಣಾ ಮೈತ್ರಿ ಹಾಗೂ ‘ಮೂರನೇ ಮೋರ್ಚಾ’ ರಚನೆ ಕುರಿತು ಮಾತುಕತೆಗಳು ಗಂಗಾನದಿ ತೀರದಲ್ಲಿ ಸದ್ದು ಮಾಡುತ್ತಿವೆ. ಈ ಬೆಳವಣಿಗೆಯ ಬೆನ್ನಲ್ಲೇ ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಓವೈಸಿ ನಡುವೆ ಕಾವ್ಯಾತ್ಮಕ ಹಾಗೂ ಮಾತಿನ ಚಕಮಕಿ ತೀವ್ರಗೊಂಡಿದೆ.

ದಲಿತ್-ಮುಸ್ಲಿಂ ಸಮೀಕರಣದ ಲೆಕ್ಕಾಚಾರ & ಮೂರನೇ ಮೈತ್ರಿ ಕೂಟ:

Advertisement

ಉತ್ತರ ಪ್ರದೇಶ ಚುನಾವಣೆಯಲ್ಲಿ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದಲ್ಲಿ ಸ್ಥಾನ ಪಡೆಯಲು ಅಸಾದುದ್ದೀನ್ ಓವೈಸಿ ಬಯಸಿದ್ದರು. ಆದರೆ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳು ಅವರ ಆಶಯವನ್ನು ಕಡೆಗಣಿಸಿದವು. ಇದರೊಂದಿಗೆ ದಲಿತ ಮತ್ತು ಮುಸ್ಲಿಂ ಮತ ಬ್ಯಾಂಕ್ ಅನ್ನು ಒಗ್ಗೂಡಿಸುವ ಉದ್ದೇಶದಿಂದ ಚಂದ್ರಶೇಖರ್ ಆಜಾದ್ ಮತ್ತು ಓವೈಸಿ ಕೈಜೋಡಿಸುತ್ತಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ರಾಜಕೀಯ ಪರ್ಯಾಯವನ್ನು ಸೃಷ್ಟಿಸಲು ಮುಂದಾಗಿವೆ.

ಅಖಿಲೇಶ್ ಯಾದವ್ ವ್ಯಂಗ್ಯ: ಕವಿತೆಯ ಮೂಲಕ ವಾಗ್ದಾಳಿ:

Advertisement

ಚಂದ್ರಶೇಖರ್ ಮತ್ತು ಓವೈಸಿ ಮೈತ್ರಿ ವದಂತಿಗಳ ಕುರಿತು ಪ್ರತಿಕ್ರಿಯಿಸಿರುವ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಎಕ್ಸ್‌ (X) ಸಾಮಾಜಿಕ ಜಾಲತಾಣದಲ್ಲಿ ಕವಿತೆಯೊಂದನ್ನು ಬರೆಯುವ ಮೂಲಕ ತೀವ್ರ ಟೀಕೆ ಮಾಡಿದ್ದರು. “ಚುನಾವಣೆಯ ಸಮಯದಲ್ಲಿ ಮಾತ್ರ ಅವರು ಹಾರುತ್ತಾ ಏಕೆ ಬರುತ್ತಾರೆ? ಅವರು ತಮ್ಮ ಯಜಮಾನರು ಏನು ಹೇಳುತ್ತಾರೋ ಅದನ್ನು ಹೇಳುತ್ತಾರೆ ಮತ್ತು ನಂತರ ಹೊರಟು ಹೋಗುತ್ತಾರೆ. ನೀರಿನ ಬದಲು ಬೆಂಕಿಯನ್ನು ತರುವ ಆ ನಕಲಿ ಹಿತೈಷಿಗಳು, ತಮ್ಮ ಸ್ವಂತ ಜನರು ದಬ್ಬಾಳಿಕೆಗೆ ಒಳಗಾದಾಗ ಎಲ್ಲಿ ಕಣ್ಮರೆಯಾಗುತ್ತಾರೆ? ಅವರನ್ನು ರಾಜಕೀಯದ ಅಲೆಮಾರಿ ವ್ಯಾಪಾರಿಗಳು ಎಂದು ಕರೆಯಲಾಗುತ್ತದೆ” ಎಂದು ಅಖಿಲೇಶ್ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: ಅಂದು ನಾನು ಪ್ರಧಾನಿಯಾಗದಿರಲು ಆ ಇಬ್ಬರು ಕಾರಣ: ‘ಬಿಲಾಂಗಿಂಗ್’ ಪುಸ್ತಕದಲ್ಲಿ ರಾಜಕೀಯ ರಹಸ್ಯ ಬಿಚ್ಚಿಟ್ಟ ಸೋನಿಯಾ ಗಾಂಧಿ

Advertisement

ಓವೈಸಿ ತಿರುಗೇಟು: ಅಖಿಲೇಶ್ ಹಾಗೂ ಎಸ್‌ಪಿ ನಾಯಕರ ವಿರುದ್ಧ ಆಕ್ರೋಶ:

ಅಖಿಲೇಶ್ ಯಾದವ್ ಅವರ ಟೀಕೆಗಳಿಗೆ ತಿರುಗೇಟು ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಸಮಾಜವಾದಿ ಪಕ್ಷದ ಮುಸ್ಲಿಂ ಸಂಸದರು ಹಾಗೂ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಖಿಲೇಶ್ ಯಾದವ್ ಅವರ ಅಯೋಧ್ಯೆ ಭೇಟಿಯನ್ನು ವಿರೋಧಿಸಿದ ಅವರು, “ಬಾಬರಿ ಮಸೀದಿ ಧ್ವಂಸದ ನಂತರ ನಡೆದ ಗಲಭೆಯ ಸಮಯದಲ್ಲಿ ಯಾರ ತಂದೆಂದಿರು ಜೈಲಿಗೆ ಹೋಗಿದ್ದರು? ಈ ಬಗ್ಗೆ ಎಸ್ಪಿ ಶಾಸಕರು ತಮ್ಮ ಪಕ್ಷದ ಅಧ್ಯಕ್ಷರನ್ನು ಪ್ರಶ್ನಿಸಬೇಕು” ಎಂದು ಆಗ್ರಹಿಸಿದರು.

ಬಾಲಿವುಡ್‌ನ ಜನಪ್ರಿಯ ‘ಶೋಲೆ’ ಚಿತ್ರದ ಸಂಭಾಷಣೆಯನ್ನು ಉಲ್ಲೇಖಿಸಿ ಎಸ್‌ಪಿ ನಾಯಕರನ್ನು ವ್ಯಂಗ್ಯವಾಡಿದ ಓವೈಸಿ, ಖ್ಯಾತ ಉರ್ದು ಕವಿ ಮಿರ್ಜಾ ಗಾಲಿಬ್ ಅವರ ಶಾಯರಿಯನ್ನು ಉಲ್ಲೇಖಿಸಿ  ಟೀಕೆ ಮಾಡಿದರು.

“ಕಾಬಾ ಕಿಸ್ ಮುಂಹ್ ಸೆ ಜಾವೋಗೆ ಗಾಲಿಬ್, ಶರಮ್ ತುಮ್ಕೊ ಮಗರ್ ನಹೀಂ ಆತಿ” (ಯಾವ ಮುಖ ಹೊತ್ತು ಅಯೋಧ್ಯೆಗೆ ಹೋಗುತ್ತೀಯಾ ಗಾಲಿಬ್, ನಿನಗೆ ಸ್ವಲ್ಪವೂ ನಾಚಿಕೆಯಾಗುವುದಿಲ್ಲವೇ?) ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬೆಳವಣಿಗೆಗಳು ಮುಂಬರುವ ಯುಪಿ ವಿಧಾನಸಭಾ ಚುನಾವಣೆಯ ರಾಜಕೀಯ ಕಣವನ್ನು ಮತ್ತಷ್ಟು ರಂಗೇರಿಸಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ