ಬಂಟ್ವಾಳ: ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ; 9ನೇ ತರಗತಿ ವಿದ್ಯಾರ್ಥಿ ದಾರುಣ ಸಾವು

ಬಂಟ್ವಾಳ: ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ 14 ವರ್ಷದ 9ನೇ ತರಗತಿ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ಬಂಟ್ವಾಳದ ಬೆಂಜನಪದವು ಸಮೀಪದ ಕಲ್ಪಣೆ ಎಂಬಲ್ಲಿ ನಡೆದಿದೆ. ಮೃತ ಬಾಲಕನನ್ನು ಅಮ್ಮಾಡಿ ದೇವಿನಗರ ಲೋರಿಬೆಟ್ಟು ನಿವಾಸಿ ಸುಜಿನ್ ಎಸ್. (14) ಎಂದು ಗುರುತಿಸಲಾಗಿದೆ.

ನವೆಂಬರ್ 14ರಂದು ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಸುಜಿನ್ ಬೈಕ್‌ನಲ್ಲಿ ಬೆಂಜನಪದವಿನಿಂದ ಪೊಳಲಿ ಕಡೆಗೆ ತೆರಳುತ್ತಿದ್ದನು. ಈ ವೇಳೆ ಕಲ್ಪಣೆ ಸಮೀಪ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಆತನ ಬೈಕ್ ವೇಗವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ಸುಜಿನ್‌ನನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 15ರಂದು ಬೆಳಗ್ಗೆ ಸುಜಿನ್ ಮೃತಪಟ್ಟಿದ್ದಾನೆ.

Advertisement

ಇದನ್ನೂ ಓದಿ: ಮೈಸೂರು: ಭೀಕರ ರಸ್ತೆ ಅಪಘಾತ – ಖಾಸಗಿ ಸ್ಲೀಪರ್ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ನಾಲ್ವರು ಸಾವು

ಮೃತ ಬಾಲಕ ಸುಜಿನ್ ಸ್ಥಳೀಯ ಡೊಮಿನಿಕ್ ವಿದ್ಯಾಸಂಸ್ಥೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಚಿಕ್ಕ ವಯಸ್ಸಿನಲ್ಲೇ ಅಪಘಾತಕ್ಕೆ ಬಲಿಯಾದ ವಿದ್ಯಾರ್ಥಿಯ ಸಾವಿಗೆ ಪೋಷಕರು, ಸಹಪಾಠಿಗಳು ಹಾಗೂ ಶಾಲಾ ಆಡಳಿತ ಮಂಡಳಿ ತೀವ್ರ ಕಂಬನಿ ಮಿಡಿದಿದೆ.  ಅಪಘಾತದ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ಎಸ್‌ಐ ಆದರ್ಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Advertisement

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement