ಬೆಂಗಳೂರು: ಡಿಸೆಂಬರ್ 2ರಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ರಾಜಕೀಯ ಒತ್ತಡ ಎದುರಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ, 2022’ (ಮತಾಂತರ ವಿರೋಧಿ ಕಾಯ್ದೆ) ಹಾಗೂ ‘ಗೋ ಸಂರಕ್ಷಣಾ ಕಾಯ್ದೆ, 2020’ ಅನ್ನು ತಕ್ಷಣವೇ ರದ್ದುಗೊಳಿಸಬೇಕು ಎಂಬ ಕೂಗು ತೀವ್ರಗೊಂಡಿದೆ.
ಇದರ ಜೊತೆಗೆ ಪ್ರವರ್ಗ 2B ಅಡಿಯಲ್ಲಿ ಶೇ. 4ರಷ್ಟು ಮುಸ್ಲಿಂ ಮೀಸಲಾತಿಯನ್ನು ಪುನಃಸ್ಥಾಪಿಸಬೇಕು ಎಂಬ ಬೇಡಿಕೆಯೂ ಕೇಳಿಬಂದಿದ್ದು, ಈ ಬೆಳವಣಿಗೆಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಪರಿಸ್ಥಿತಿಯಲ್ಲಿ ಇರಿಸಿದೆ.

ನವೆಂಬರ್ 12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ‘ಅಲ್ಪಸಂಖ್ಯಾತರ ಧ್ವನಿ’ ಮತ್ತು ಕರ್ನಾಟಕದ ದಮನಿತ ವರ್ಗಗಳ ಸಂಘಟನೆಗಳು ಆಯೋಜಿಸಿದ್ದ ಬೃಹತ್ ಸಮಾವೇಶ ಹಾಗೂ ಪ್ರತಿಭಟನಾ ರ್ಯಾಲಿಯ ಬಳಿಕ ಈ ವಿಚಾರವು ಮತ್ತಷ್ಟು ವೇಗ ಪಡೆದುಕೊಂಡಿದೆ. ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳು, ದಲಿತ ಗುಂಪುಗಳು, ರೈತ ಸಂಘಟನೆಗಳು ಹಾಗೂ ನಾಗರಿಕ ಹಕ್ಕುಗಳ ಕಾರ್ಯಕರ್ತರು ಈ ಸಭೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಜ್ಞಾಪಕ ಪತ್ರ ಸಲ್ಲಿಸಿದ್ದಾರೆ.
ಮತಾಂತರ ನಿಷೇಧ ಮತ್ತು ಗೋಹತ್ಯೆ ನಿಷೇಧ ಕಾಯ್ದೆಗಳ ರದ್ದತಿ, ಶೇ. 4ರಷ್ಟು ಮುಸ್ಲಿಂ ಮೀಸಲಾತಿ ಮರುಸ್ಥಾಪನೆ ಹಾಗೂ ದ್ವೇಷ ಭಾಷಣ ಮತ್ತು ಕೋಮು ಹಿಂಸಾಚಾರದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಈ ಸಂಘಟನೆಗಳು ಒತ್ತಾಯಿಸಿವೆ.

ಇದನ್ನೂ ಓದಿ: ಕರ್ನಾಟಕದ ಒಳನಾಡು ಮಾರ್ಗವಾಗಿ ಕಟ್ರಾಕ್ಕೆ ನವಯುಗ ಎಕ್ಸ್ಪ್ರೆಸ್; ಕೇಂದ್ರ ಸಚಿವರಿಗೆ ಕಿಶೋರ್ ಕುಮಾರ್ ಮನವಿ
ಒಂದೆಡೆ ಅಲ್ಪಸಂಖ್ಯಾತ ಮತ್ತು ಪ್ರಗತಿಪರ ಸಂಘಟನೆಗಳು ಎರಡೂ ಕಾಯ್ದೆಗಳನ್ನು ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರೆ, ಮತ್ತೊಂದೆಡೆ ವಿಶ್ವ ಹಿಂದೂ ಪರಿಷತ್ (VHP) ಈ ಕಾಯ್ದೆಗಳ ಯಾವುದೇ ರೀತಿಯ ರದ್ದತಿಯನ್ನು ಬಲವಾಗಿ ವಿರೋಧಿಸಿದೆ.

ಪರ-ವಿರೋಧದ ಒತ್ತಡಗಳ ನಡುವೆ ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದ್ದು, ಡಿಸೆಂಬರ್ 2ರಿಂದ ನಡೆಯಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯ ಭಾರಿ ಚರ್ಚೆ ಹಾಗೂ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗುವ ಸಾಧ್ಯತೆಯಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

