ರಾಯಚೂರು: ರಾಜ್ಯದ ಎರಡು ಕಡೆಗಳಲ್ಲಿ ಸಂಭವಿಸಿರುವ ಹೃದಯವಿದ್ರಾವಕ ಘಟನೆಗಳು ಎಲ್ಲರ ಕಣ್ಣೀರಿಗೆ ಕಾರಣವಾಗಿವೆ. ರಾಯಚೂರು ಜಿಲ್ಲೆಯಲ್ಲಿ ತಂದೆಯ ಅಗಲಿಕೆಯ ಆಘಾತವನ್ನು ಅರಗಿಸಿಕೊಳ್ಳಲಾಗದೆ ಮಗನೂ ಕೂಡ ಕೆಲವೇ ಕ್ಷಣಗಳಲ್ಲಿ ಪ್ರಾಣಬಿಟ್ಟಿದ್ದು, ತಂದೆ-ಮಗ ಸಾವಿನಲ್ಲೂ ಒಂದಾಗಿದ್ದಾರೆ. ಮತ್ತೊಂದೆಡೆ, ಹಾವೇರಿ ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಇಬ್ಬರು ಆತ್ಮೀಯ ಸ್ನೇಹಿತರ ಅಂತ್ಯಕ್ರಿಯೆಯನ್ನು ಒಟ್ಟಿಗೇ ನೆರವೇರಿಸಿರುವ ಮನಕಲಕುವ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತಿಪ್ಪನಹಟ್ಟಿ ಗ್ರಾಮದಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಗ್ರಾಮದ ನಿವಾಸಿ ಅಮೀನ್ ಸಾಬ್ (58) ಅವರಿಗೆ ನಿನ್ನೆ (ನವೆಂಬರ್ 15) ದಿಢೀರ್ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದರು. ಪ್ರೀತಿಯ ತಂದೆಯ ಅನಿರೀಕ್ಷಿತ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪುತ್ರ ಮೆಹಬೂಬ್ ಸಾಬ್ (37) ತೀವ್ರ ಆಘಾತಕ್ಕೊಳಗಾಗಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ತಂದೆಯ ಅಗಲಿಕೆಯ ದುಃಖವನ್ನು ತಡೆಯಲಾರದೆ ಮೆಹಬೂಬ್ ಸಾಬ್ ತೀವ್ರವಾಗಿ ನಿತ್ರಾಣಗೊಂಡಿದ್ದು, ಅವರ ರಕ್ತದೊತ್ತಡ (BP) ದಿಢೀರ್ ಕುಸಿದು ಆರೋಗ್ಯದಲ್ಲಿ ಗಂಭೀರ ಏರುಪೇರಾಗಿದೆ. ಕುಟುಂಬಸ್ಥರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ, ಮಾರ್ಗಮಧ್ಯೆಯೇ ಮೆಹಬೂಬ್ ಸಾಬ್ ಕೊನೆಯುಸಿರೆಳೆದಿದ್ದಾರೆ. ಆಧಾರಸ್ತಂಭವಾಗಿದ್ದ ತಂದೆ-ಮಗ ಇಬ್ಬರನ್ನೂ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಸ್ವಗ್ರಾಮ ತಿಪ್ಪನಹಟ್ಟಿಯಲ್ಲಿ ಒಟ್ಟಿಗೇ ಇವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.

ಇದನ್ನೂ ಓದಿ : ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಜೊತೆಗಿದ್ದ ಪಾಲುದಾರನೇ ಕೊಟ್ಟ 30 ಲಕ್ಷದ ಸುಪಾರಿ
ಮತ್ತೊಂದು ಮನಕಲಕುವ ಘಟನೆ ಹಾವೇರಿ ತಾಲೂಕಿನ ಮರೋಳ ಗ್ರಾಮದಲ್ಲಿ ನಡೆದಿದೆ. ಇಬ್ಬರು ಆತ್ಮೀಯ ಸ್ನೇಹಿತರಾದ ಅಭಿಷೇಕ್ ಮಾಗಡಿ ಮತ್ತು ಮುತ್ತು ಹುಲಿಕಟ್ಟಿ ಅವರು ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದರು. ಕುಷ್ಟಗಿ-ಗಜೇಂದ್ರಗಡ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿತ್ತು. ಬದುಕಿದ್ದಾಗ ಸದಾ ಜೊತೆಯಲ್ಲೇ ಓಡಾಡಿಕೊಂಡಿದ್ದ ಪ್ರಾಣಸ್ನೇಹಿತರ ದುರಂತ ಸಾವು ಇಡೀ ಗ್ರಾಮವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಮೃತರ ಪೋಷಕರು ತಮ್ಮ ಇಬ್ಬರು ಗೆಳೆಯರ ಅಂತ್ಯಕ್ರಿಯೆಯನ್ನು ಸ್ವಗ್ರಾಮ ಮರೋಳದಲ್ಲಿ ಒಂದೇ ಕಡೆ, ಒಟ್ಟಿಗೇ ನೆರವೇರಿಸಿದ್ದು ಸ್ಥಳೀಯರ ಕಣ್ಣೀರಿಗೆ ಕಾರಣವಾಯಿತು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ


