ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ (St. Philomena PU College) ಮಹಿಳಾ ಸಬಲೀಕರಣ ಘಟಕದ ಆಶ್ರಯದಲ್ಲಿ, ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ‘ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕಾನೂನು ತಿದ್ದುಪಡಿಗಳು’ ಕುರಿತು ಕಾರ್ಯಾಗಾರವು ನ. 24ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಪುತ್ತೂರು ಅನಿಕೇತನ ಲಾ ಚೇಂಬರ್ಸ್ನ ವಕೀಲ ಕೃಷ್ಣಪ್ರಸಾದ್ ಎನ್.ಆರ್. ಮಾತನಾಡಿ, ಪತ್ರಿಕೆಗಳಲ್ಲಿ ಆಗಾಗ ವರದಿಯಾಗುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಬಾಲಕಿಯರ ಅಪಹರಣ, ಆ್ಯಸಿಡ್ ದಾಳಿ ಮುಂತಾದ ಘಟನೆಗಳು ಸಮಾಜದಲ್ಲಿ ಆತಂಕವನ್ನು ಉಂಟುಮಾಡುತ್ತಿವೆ ಎಂದರು. ಇಂತಹ ಅನ್ಯಾಯಗಳು ನಡೆಯುವಾಗ ಅನೇಕರು ಧ್ವನಿ ಎತ್ತದೆ ಮೌನವಾಗಿರುವುದು ವಿಷಾದನೀಯ. ಅನ್ಯಾಯದ ವಿರುದ್ಧ ಪ್ರತಿಯೊಬ್ಬರೂ ಧೈರ್ಯದಿಂದ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ಮಹಿಳೆಯರ ಮೇಲಿನ ದೌರ್ಜನ್ಯವೆಂದರೆ ಕೇವಲ ದೈಹಿಕ ಹಿಂಸೆ ಮಾತ್ರವಲ್ಲ; ಮಾನಸಿಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿನ ಶೋಷಣೆ ಮತ್ತು ತಾರತಮ್ಯವೂ ದೌರ್ಜನ್ಯದ ವ್ಯಾಪ್ತಿಗೆ ಬರುತ್ತವೆ ಎಂದು ವಿವರಿಸಿದರು. ಮಹಿಳೆಯರ ಮೇಲಿನ ಯಾವುದೇ ರೀತಿಯ ದೌರ್ಜನ್ಯವನ್ನೂ ಸಹಿಸದೆ, ಅದರ ವಿರುದ್ಧ ಧ್ವನಿ ಎತ್ತಬೇಕು ಹಾಗೂ ಇತರರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಮಹಿಳೆಯರ ಸುರಕ್ಷತೆ, ಘನತೆ ಮತ್ತು ಸಮಾನತೆಗೆ ಹೆಚ್ಚಿನ ಪ್ರಯತ್ನ ಅಗತ್ಯ – ಪ್ರಾಂಶುಪಾಲರು:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ನಮ್ಮ ಸಮಾಜವು ಸಾಂಪ್ರದಾಯಿಕವಾಗಿ ಪುರುಷ ಪ್ರಧಾನ ಸಮಾಜವಾಗಿದ್ದು, ಪುರುಷರ ಪ್ರಾಬಲ್ಯದಿಂದಾಗಿ ಮಹಿಳೆಯರಿಗೆ ಸಮಾನ ಸ್ವಾತಂತ್ರ್ಯ ಮತ್ತು ಅವಕಾಶಗಳು ದೊರೆಯದೆ ಇದ್ದ ಸಂದರ್ಭಗಳಿವೆ. ಈ ಅಸಮಾನತೆಯು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಾರಣವಾಗಿದೆ ಎಂದರು.
ಶಿಕ್ಷಣದಿಂದಾಗಿ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಿವೆ. ಹಿಂದೆ ಮಹಿಳೆಯರಿಗೆ ಸ್ವಾತಂತ್ರ್ಯ ಬಹಳ ಕಡಿಮೆಯಿತ್ತು. ಆದರೆ ಇಂದು ಮಹಿಳೆಯರು ಉತ್ತಮ ಶಿಕ್ಷಣ ಪಡೆದು, ಸ್ವಾವಲಂಬಿಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಸ್ವಾತಂತ್ರ್ಯ ಮತ್ತು ಸಮಾನ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಆದಾಗ್ಯೂ, ಮಹಿಳೆಯರ ಮೇಲಿನ ದೌರ್ಜನ್ಯಗಳು ಇನ್ನೂ ಮುಂದುವರಿದಿರುವುದು ಕಳವಳಕಾರಿ ಸಂಗತಿಯಾಗಿದೆ. ಮಹಿಳೆಯರ ಸುರಕ್ಷತೆ, ಘನತೆ ಮತ್ತು ಸಮಾನತೆಯನ್ನು ಖಚಿತಪಡಿಸಲು ಇನ್ನೂ ಹೆಚ್ಚಿನ ಪ್ರಯತ್ನಗಳ ಅಗತ್ಯವಿದೆ ಎಂದು ಹೇಳಿದರು.

ಇದನ್ನೂ ಓದಿ: ಬಡವರ ರಕ್ತ ಹೀರುವ ಸರ್ಕಾರ: ಕೋಟೆಕಾರಿನಲ್ಲಿ ಕಿಶೋರ್ ಕುಮಾರ್ ಪುತ್ತೂರು ತೀವ್ರ ವಾಗ್ದಾಳಿ
ವೇದಿಕೆಯಲ್ಲಿ ಮಹಿಳಾ ಸಬಲೀಕರಣ ಘಟಕದ ನಿರ್ದೇಶಕರಾದ ಸತ್ಯಾಲತಾ ರೈ ಹಾಗೂ ಅವಿನಾ ಮಾಡ್ತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ಗ್ಲೆನಿಶಾ ಸ್ವಾಗತಿಸಿ, ವಿಯೋಲಾ ಕ್ರಾಸ್ತಾ ಅತಿಥಿಗಳನ್ನು ಪರಿಚಯಿಸಿ, ಪುತೀಕ್ಟಾ ವಂದಿಸಿ, ಜೀವಿತಾ ಕೆ.ಜೆ. ಕಾರ್ಯಕ್ರಮ ನಿರೂಪಿಸಿದರು.

