ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಶ್ರೀ ಕ್ಷೇತ್ರ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ ಜನವರಿ 3 ರಂದು ನಡೆಯಲಿದೆ. ವರ್ಧಂತಿ ಉತ್ಸವದ ಪ್ರಯುಕ್ತ ಭಜನಾ ಕಮ್ಮಟ ಹಾಗೂ ರಾಷ್ಟ್ರ ವಿಜಯ ಯಜ್ಞ ಕೂಡ ನೆರವೇರಲಿದೆ.
ದೇಶದ ವಿರುದ್ಧ ನಡೆಯುತ್ತಿರುವ ಷಡ್ಯಂತರ ಮತ್ತು ಗಂಡಾಂತರಗಳಿಂದ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಆಯೋಜಿಸಿರುವ ರಾಷ್ಟ್ರ ವಿಜಯ ಯಜ್ಞ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಲಿದ್ದು, ದೀಪೋಜ್ವಲನೆಯನ್ನು ದೇವಾಲಯದ ಮಾಜಿ ಆಡಳಿತ ಮಂಡಳಿ ಮೊಕ್ತೇಸರ ವಿಕಾಸ್ ಕುಮಾರ್ ಪುತ್ತೂರು ಅವರು ನೆರವೇರಿಸಲಿದ್ದಾರೆ.

ಸಂಜೆ ನಡೆಯುವ ಭಜನಾ ಕಮ್ಮಟದ ದೀಪೋಜ್ವಲನೆಯನ್ನು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ನೆರವೇರಿಸಲಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಭಜನಾ ಕಮ್ಮಟ ಗಾಯನಕ್ಕೆ ಭಕ್ತಸಾಗರ ತಲೆದೂಗಲಿದೆ.
ವಿಶೇಷ ಆಕರ್ಷಣೆ ಕುಣಿತ ಭಜನೆ:
ಭಜನಾ ಕಮ್ಮಟವು ನೆರೆದ ಭಕ್ತ ಮಂದಿಯನ್ನು ವಿಶೇಷವಾಗಿ ಆಕರ್ಷಿಸಲಿದೆ. ಜಿಲ್ಲೆಯ ಸುಪ್ರಸಿದ್ಧ ಕುಣಿತ ಭಜನಾ ತಂಡಗಳಿಂದ ಏಕಕಾಲದಲ್ಲಿ ಕುಣಿತ ಭಜನೆ ನಡೆಯಲಿದೆ.
ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ:
ಮೋಂತಿಮಾರು ಅಮ್ಮನವರ ಕ್ಷೇತ್ರದಲ್ಲಿ ರಾತ್ರಿ 10.30 ರಿಂದ ಬಪ್ಪನಾಡು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದ ಕಿರು ಜಾತ್ರೋತ್ಸವದ ಪ್ರಯುಕ್ತ ರಾತ್ರಿ ಅಮ್ಮನವರ ಪಲ್ಲಕ್ಕಿ ಉತ್ಸವ ಚಂಡೆ, ವಾದ್ಯ, ಮಂತ್ರ ಘೋಷ, ಭಜನೆಯೊಂದಿಗೆ ನಡೆಯಲಿದ್ದು, ದರ್ಶನ ಬಲಿಯೂ ಇರಲಿದೆ. ಅಮ್ಮನವರ ಪಲ್ಲಕ್ಕಿ ಹೊರಾಂಗಣಕ್ಕೆ ಸಾಗಿ ಅಶ್ವತ್ಥ ಕಟ್ಟೆಯಲ್ಲಿ ಆಸೀನರಾಗುವ ದುರ್ಗಾಪರಮೇಶ್ವರಿಗೆ ಇಲ್ಲಿ ವಿಶೇಷ ಪೂಜೆ ನೆರವೇರಲಿದೆ.

ಮೋಂತಿಮಾರು ಬೆಡಿ:
ಪಲ್ಲಕ್ಕಿ ಉತ್ಸವ ಆರಂಭವಾಗುತ್ತಿದ್ದಂತೆ ಸುಡುಮದ್ದು ಪ್ರದರ್ಶನವೂ ಪ್ರಾರಂಭವಾಗಲಿದೆ. ಅಶ್ವತ್ಥಕಟ್ಟೆಯಲ್ಲಿ ಅಮ್ಮನವರ ಪೂಜೆ ವೇಳೆಯಲ್ಲಿ ಬೃಹತ್ ಪ್ರಮಾಣದಲ್ಲಿ ಸುಡು ಮದ್ದು ಪ್ರದರ್ಶನ ನಡೆಯುತ್ತದೆ. ಇದನ್ನು ಮೋಂತಿಮಾರು ಬೆಡಿ ಎಂದೇ ಕರೆಯಲಾಗುತ್ತದೆ.
ಹೊರಾಂಗಣದ ಪೂಜೆ, ಪ್ರಸಾದ ವಿತರಣೆ ಬಳಿಕ ಜಗನ್ಮಾತೆಯು ದೇವಾಲಯದ ಒಳಗೆ ಪ್ರವೇಶಿಸುತ್ತಾಳೆ. ಕೊನೆಯಲ್ಲಿ ಭಕ್ತ ಸಾಗರದೊಂದಿಗೆ ಅಮ್ಮನವರಿಗೆ ಮಹಾಮಂಗಳಾರತಿ ನಡೆದು ಪ್ರಸಾದ ವಿತರಣೆ ನಡೆಯಲಿದೆ.
ಮೋಂತಿಮಾರು ದುರ್ಗಾಪರಮೇಶ್ವರಿ ಭಕ್ತರ ಪಾಲಿನ ಅನ್ನಪೂರ್ಣೇಶ್ವರಿಯೂ ಆಗಿದ್ದು, ನಿತ್ಯ ಅನ್ನದಾನವೂ ಶ್ರೀಕ್ಷೇತ್ರದಲ್ಲಿ ನಡೆಯುತ್ತದೆ. ಜಾತ್ರಾ ಮಹೋತ್ಸವದಂದೂ ಅನ್ನಸಂತರ್ಪಣೆ ನಡೆಯಲಿದೆ.

