ಪುತ್ತೂರು : ಕರಾವಳಿಯ ಸಾಂಸ್ಕೃತಿಕ ಪ್ರತೀಕವಾಗಿರುವ ಕಂಬಳವು ಇದೀಗ ಕರಾವಳಿ ವ್ಯಾಪ್ತಿಗೆ ಸೀಮಿತವಾಗದೆ ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಇಂತಹ ಕಂಬಳದ ಬಗ್ಗೆ ಸಣ್ಣ ಮಕ್ಕಳಿಂದ ಹಿಡಿದು ತರುಣರವರೆಗೆ ಮಾತ್ರವಲ್ಲದೆ, ಹಿರಿಯರಿಗೂ ಹೆಚ್ಚಿನ ಆಸಕ್ತಿ ಇರುತ್ತದೆ ಎಂಬುದಕ್ಕೆ ಸುಳ್ಯದ 73 ವರ್ಷದ ಶ್ರೀಧರ್ ಅವರೇ ಸಾಕ್ಷಿ.
ಹೌದು, ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರಾ ಗದ್ದೆಯಲ್ಲಿ ನಡೆಯುತ್ತಿರುವ ಪ್ರಸಿದ್ಧ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ ಆಸಕ್ತರಿಗೆ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ತರುಣರೇ ಇದ್ದ ಈ ಸ್ಪರ್ಧೆಯಲ್ಲಿ ಅತ್ಯುತ್ಸಾಹದಿಂದ ಶ್ರೀಧರ್ ಅವರು ಪಾಲ್ಗೊಂಡಿರುವುದನ್ನು ನೋಡಿ ನೆರೆದಿದ್ದ ಜನರು ಅಚ್ಚರಿಗೊಂಡರು.


ಯಾರಿಗೇನು ಕಮ್ಮಿ ಇಲ್ಲ ಎಂಬಂತೆ ತಾನು ಮೊದಲ ಸ್ಥಾನ ಬರಬೇಕೆಂಬ ತುಡಿತ ಅವರಲ್ಲಿತ್ತು ಎಂಬುದನ್ನು ಓಟದ ಪ್ರಾರಂಭದಲ್ಲಿ ಅವರು ನಡೆಸುತ್ತಿದ್ದ ತಯಾರಿಗಳು ಹೇಳುತ್ತಿದ್ದವು. ಓಟಕ್ಕೂ ಮುನ್ನ ದೇಹಕ್ಕೆ ವ್ಯಾಯಾಮ ನೀಡಿದ ಶ್ರೀಧರ್ ಅವರು, ಸ್ಟಾರ್ಟಿಂಗ್ ಪಾಯಿಂಟಿನಲ್ಲಿ ನಿಂತು ಯುವಕರೊಂದಿಗೆ ಓಡಿದ್ದಾರೆ. 125 ಮೀ ದೂರದ ಕರೆಯಲ್ಲಿ ಓಡಿದ ಶ್ರೀಧರ್ ಅವರು ಗುರಿಯನ್ನು ತಲುಪಿಯೇ ವಿಶ್ರಮಿಸಿದರು. ಈ ವೇಳೆ ನೆರೆದಿದ್ದ ಕಂಬಳ ಅಭಿಮಾನಿಗಳು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಇದನ್ನೂ ಓದಿ : Puttur Kambala: 33ನೇ ವರ್ಷದ ಪುತ್ತೂರು ಕಂಬಳಕ್ಕೆ ಅದ್ದೂರಿಯ ಚಾಲನೆ
ವೀಡಿಯೋ ಇಲ್ಲಿದೆ :
ದೇಹಕ್ಕೆ ವಯಸ್ಸಾಗಿರಬಹುದು. ಆದರೆ, ಉತ್ಸಾಹಕ್ಕೆ ವಯಸ್ಸಿಲ್ಲವೆಂಬುದನ್ನು ಶ್ರೀಧರ್ ಅವರು ಓಟದ ಮೂಲಕ ತಿಳಿಸಿದ್ದಾರೆ. ಅವರು ಓಟದಲ್ಲಿ ಹಿಂದುಳಿದರೂ ಜನರ ಮನಸ್ಸನ್ನು ಗೆದ್ದಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

