ಆರೋಗ್ಯ : ಮಹಿಳೆಯರಲ್ಲಿ ಥೈರಾಯ್ಡ್ ಕ್ಯಾನ್ಸರ್ ಪ್ರಕರಣಗಳು ಪುರುಷರಿಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ. ಆದರೆ, ಮೊದಲ ಹಂತದಲ್ಲೇ ರೋಗ ಪತ್ತೆ ಹಚ್ಚಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದರೆ ಸಂಪೂರ್ಣ ಗುಣಮುಖವಾಗುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ತಿಳಿಸಿದ್ದಾರೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೆಡಿಕಲ್ ಆಂಕಾಲಜಿ ವಿಭಾಗದ ಹಿರಿಯ ಸಲಹೆಗಾರ ಹಾಗೂ ಮುಖ್ಯಸ್ಥರಾದ ಡಾ. ಸನ್ನಿ ಜೈನ್, ಮಹಿಳೆಯರಲ್ಲಿ ಈ ರೋಗ ಹೆಚ್ಚಾಗುವ ಪ್ರಮುಖ ಕಾರಣವಾಗಿ ಹಾರ್ಮೋನಲ್ ಬದಲಾವಣೆಗಳನ್ನು ಸೂಚಿಸಿದ್ದಾರೆ. ಮಹಿಳೆಯರಲ್ಲಿ ಥೈರಾಯ್ಡ್ ಕ್ಯಾನ್ಸರ್ ಸಾಮಾನ್ಯವಾಗಿ 40 ರಿಂದ 50 ವರ್ಷದ ವಯಸ್ಸಿನೊಳಗೆ ಕಾಣಿಸಿಕೊಳ್ಳುತ್ತದೆ. ಪುರುಷರಲ್ಲಿ ಇದು 10–20 ವರ್ಷಗಳ ನಂತರ ಬೆಳೆಯುತ್ತದೆ. ಎಸ್ಟ್ರೋಜನ್ ಹಾರ್ಮೋನ್ ಥೈರಾಯ್ಡ್ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುವುದರಿಂದ ಮಹಿಳೆಯರಲ್ಲಿ ಅಪಾಯ ಹೆಚ್ಚಾಗುತ್ತದೆ, ಎಂದು ಅವರು ಹೇಳಿದರು.

ಮಹಿಳೆಯರ ಜೀವನದಲ್ಲಿ ಯೌವನಾರಂಭ, ಗರ್ಭಧಾರಣೆ ಮತ್ತು ಮೆನೋಪಾಸ್ ಹಂತಗಳಲ್ಲಿ ಸಂಭವಿಸುವ ಹಾರ್ಮೋನಲ್ ಬದಲಾವಣೆಗಳು ಥೈರಾಯ್ಡ್ ಕೋಶಗಳಲ್ಲಿ ಅಸಹಜ ಬದಲಾವಣೆಗಳಿಗೆ ಕಾರಣವಾಗಬಹುದು. ಇದಕ್ಕೆ ಜೊತೆಗೆ ಆಟೋಇಮ್ಯೂನ್ ಥೈರಾಯ್ಡ್ ರೋಗಗಳು ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುವುದರಿಂದ ದೀರ್ಘಕಾಲದ ಉರಿಯೂತ ಕ್ಯಾನ್ಸರ್ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಡಾ. ಜೈನ್ ವಿವರಿಸಿದರು.
ಇದನ್ನೂ ಓದಿ : Dengue : ವಿಟಮಿನ್ ಡಿ ಕೊರತೆ ಗಂಭೀರ ಡೆಂಗ್ಯೂಗೆ ಕಾರಣ : ಭಾರತಕ್ಕೆ ಎಚ್ಚರಿಕೆ
ನಿರ್ಲಕ್ಷಿಸಬಾರದ ಆರಂಭಿಕ ಲಕ್ಷಣಗಳು ;
ಥೈರಾಯ್ಡ್ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು ಸಣ್ಣದಾಗಿರುವುದರಿಂದ ಬಹುತೇಕ ಜನರು ಗಮನ ಹರಿಸುವುದಿಲ್ಲ. ಕುತ್ತಿಗೆಯ ಮುಂಭಾಗದಲ್ಲಿ ನೋವಿಲ್ಲದ ಗೆಡ್ಡೆ ಅಥವಾ ಊತ ಕಾಣಿಸುವುದು ಸಾಮಾನ್ಯ ಲಕ್ಷಣವಾಗಿದೆ. ಇದರ ಪರಿಣಾಮ ಧ್ವನಿಯಲ್ಲಿ ಬದಲಾವಣೆ, ನುಂಗಲು ತೊಂದರೆ, ಕುತ್ತಿಗೆಯಲ್ಲಿ ಒತ್ತಡದ ಅನುಭವ, ದೀರ್ಘಕಾಲದ ಕೆಮ್ಮು ಮತ್ತು ಕುತ್ತಿಗೆಯ ಲಿಂಫ್ ನೋಡ್‌ಗಳ ಉಬ್ಬರವೂ ಎಚ್ಚರಿಕೆಯ ಸೂಚನೆಗಳಾಗಿವೆ. ಗಾತ್ರದಲ್ಲಿ ಹೆಚ್ಚುತ್ತಿರುವ ಥೈರಾಯ್ಡ್ ಊತ ಅಥವಾ ಧ್ವನಿ ಬದಲಾವಣೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಮೊದಲ ಹಂತದಲ್ಲೇ ಪರೀಕ್ಷೆ ಮಾಡಿದರೆ ಚಿಕಿತ್ಸೆ ಸುಲಭವಾಗುತ್ತದೆ ಮತ್ತು ಫಲಿತಾಂಶಗಳು ಉತ್ತಮವಾಗಿರುತ್ತವೆ, ಎಂದು ಡಾಕ್ಟರ್ ಹೇಳುತ್ತಾರೆ.
ಥೈರಾಯ್ಡ್ ಕ್ಯಾನ್ಸರ್ ಚಿಕಿತ್ಸೆ ಬಹುತೇಕ ಸಂದರ್ಭಗಳಲ್ಲಿ ಯಶಸ್ವಿಯಾಗುತ್ತದೆ. ರೋಗದ ವ್ಯಾಪ್ತಿಗೆ ಅನುಗುಣವಾಗಿ ಥೈರಾಯ್ಡ್ ಗ್ರಂಥಿಯ ಒಂದು ಭಾಗ ಅಥವಾ ಸಂಪೂರ್ಣ ಗ್ರಂಥಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವುದು ಮುಖ್ಯ ಚಿಕಿತ್ಸೆಯಾಗಿದೆ. ಥೈರಾಯ್ಡ್ ಕ್ಯಾನ್ಸರ್ ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲದಿದ್ದರೂ, ಅಪಾಯವನ್ನು ಕಡಿಮೆ ಮಾಡಬಹುದು. ಮಕ್ಕಳಲ್ಲಿ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಅನಾವಶ್ಯಕ ಕಿರಣ ಚಿಕಿತ್ಸೆಯನ್ನು ತಪ್ಪಿಸುವುದು, ಸಮತೋಲನ ಆಹಾರದಿಂದ ಸಾಕಷ್ಟು ಅಯೋಡಿನ್ ಪಡೆಯುವುದು ಹಾಗೂ ಅಪಾಯದ ಗುಂಪಿನವರು ನಿಯಮಿತ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಕುಟುಂಬದಲ್ಲಿ ಥೈರಾಯ್ಡ್ ಕ್ಯಾನ್ಸರ್ ಇತಿಹಾಸವಿರುವವರು, ಥೈರಾಯ್ಡ್ ಗುಡ್ಡೆಗಳಿರುವವರು ಹಾಗೂ ಆಟೋಇಮ್ಯೂನ್ ಥೈರಾಯ್ಡ್ ರೋಗಿಗಳಾದವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ. ಕುತ್ತಿಗೆಯ ಊತವನ್ನು ಸಮಯಕ್ಕೆ ಸರಿಯಾಗಿ ತೋರಿಸಿ, ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಂಡರೆ ಸಂಪೂರ್ಣ ಗುಣಮುಖತೆ ಸಾಧ್ಯ, ಎಂದು ಡಾ. ಸನ್ನಿ ಜೈನ್ ತಿಳಿಸಿದ್ದಾರೆ.
ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ…
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

