ನವದೆಹಲಿ: ಯುರೋಪಿಯನ್ ಒಕ್ಕೂಟದಿಂದ ಆಮದು ಮಾಡಿಕೊಳ್ಳುವ ಕಾರುಗಳ ಮೇಲಿನ ಸುಂಕವನ್ನು 110% ರಿಂದ 40% ಕ್ಕೆ ಇಳಿಸಲು ಭಾರತ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರದಂದು ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಉಭಯ ದೇಶಗಳು ಮಾತುಕತೆ ನಡೆಸುವ ಸಾಧ್ಯತೆ ಇದ್ದು, ಇದರಿಂದಾಗಿ ಭಾರತದ ಕಾರುಗಳ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 27 ರಾಷ್ಟ್ರಗಳ ಯುರೋಪಿಯನ್ ಒಕ್ಕೂಟದಿಂದ 15,000 ಯುರೋಗಳಿಗಿಂತ ಹೆಚ್ಚು ($17,739) ಆಮದು ಬೆಲೆಯನ್ನು ಹೊಂದಿರುವ ಸೀಮಿತ ಸಂಖ್ಯೆಯ ಕಾರುಗಳ ಮೇಲಿನ ತೆರಿಗೆಯನ್ನು ತಕ್ಷಣವೇ ಕಡಿಮೆ ಮಾಡಲು ಒಪ್ಪಿಕೊಂಡಿದೆ ಎಂದು ಮಾತುಕತೆಯ ಕುರಿತು ವಿವರಿಸಿದ ಎರಡು ಮೂಲಗಳು ತಿಳಿಸಿದ್ದಾಗಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಕಾಲಾನಂತರದಲ್ಲಿ ಇದನ್ನು 10% ಕ್ಕೆ ಇಳಿಸಲಾಗುವುದು ಎಂದು ಮೂಲಗಳು ತಿಳಿಸಿದ್ದಾಗಿ ವರದಿಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ಮಹೀಂದ್ರ XUV 7XO, ಎಲೆಕ್ಟ್ರಿಕ್ XEV 9S ಬಿಡುಗಡೆ, ಬೆಲೆ, ಫೀಚರ್ಸ್ ಹೀಗಿದೆ
ಈ ವ್ಯಾಪಾರ ಒಪ್ಪಂದದಿಂದಾಗಿ ವೋಕ್ಸ್ವ್ಯಾಗನ್, ಮರ್ಸಿಡಿಸ್-ಬೆನ್ಜ್ ಮತ್ತು ಬಿಎಂಡಬ್ಲ್ಯುನಂತಹ ಯುರೋಪಿಯನ್ ವಾಹನ ತಯಾರಕರಿಗೆ ಭಾರತೀಯ ಮಾರುಕಟ್ಟೆಗೆ ಪ್ರವೇಶವನ್ನು ಸುಲಭಗೊಳಿಸುತ್ತದೆ. ಮಾತುಕತೆಗಳು ಗೌಪ್ಯವಾಗಿರುವುದರಿಂದ ಮತ್ತು ಕೊನೆಯ ಕ್ಷಣದಲ್ಲಿ ಬದಲಾವಣೆಗಳಿಗೆ ಒಳಪಡುವ ಸಾಧ್ಯತೆ ಹಿನ್ನೆಲೆ ಮೂಲಗಳು ಗುರುತಿಸಲು ನಿರಾಕರಿಸಿದವು. ಭಾರತದ ವಾಣಿಜ್ಯ ಸಚಿವಾಲಯ ಮತ್ತು ಯುರೋಪಿಯನ್ ಆಯೋಗವು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿವೆ ಎಂದು ವರದಿ ಮಾಡಿದೆ.
ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಮಂಗಳವಾರ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಸುದೀರ್ಘ ಮಾತುಕತೆ ನಡೆಸಲಿದೆ. ಈ ಒಪ್ಪಂದವು ದ್ವಿಪಕ್ಷೀಯ ವ್ಯಾಪಾರವನ್ನು ವಿಸ್ತರಿಸಬಹುದು. ಅಲ್ಲದೆ, ಅಮೆರಿಕದ ಶೇ.50 ರಷ್ಟು ಸುಂಕದ ಭೀತಿ ಎದುರಿಸುತ್ತಿರುವ ಜವಳಿ ಮತ್ತು ಆಭರಣಗಳಂತಹ ಸರಕುಗಳ ರಫ್ತುಗಳು ಹೆಚ್ಚಾಬಹುದು ಎಂದು ಅಂದಾಜಿಸಲಾಗಿದೆ.
ಅಮೆರಿಕ ಮತ್ತು ಚೀನಾ ನಂತರ ಮಾರಾಟದ ದೃಷ್ಟಿಯಿಂದ ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಾರು ಮಾರುಕಟ್ಟೆಯಾಗಿದೆ. ಆದರೆ ಅದರ ದೇಶೀಯ ವಾಹನ ಉದ್ಯಮವು ಅತ್ಯಂತ ಸಂರಕ್ಷಿತವಾಗಿದೆ. ನವದೆಹಲಿ ಪ್ರಸ್ತುತ ಆಮದು ಮಾಡಿಕೊಂಡ ಕಾರುಗಳ ಮೇಲೆ 70% ಮತ್ತು 110% ಸುಂಕವನ್ನು ವಿಧಿಸುತ್ತಿದೆ. ಈ ಮಟ್ಟವನ್ನು ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಸೇರಿದಂತೆ ಕಾರ್ಯನಿರ್ವಾಹಕರು ಹೆಚ್ಚಾಗಿ ಟೀಕಿಸುತ್ತಾರೆ.
ಮತ್ತಷ್ಟು ಅಟೋಮೊಬೈ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

