ಬೆಂಗಳೂರು: ಕರ್ನಾಟಕದಲ್ಲಿ ಈ ವರ್ಷ ಮಂಕಿ ಫೀವರ್ (Kyasanur Forest Disease – KFD) ನಿಂದ ಮೊದಲ ಸಾವು ವರದಿಯಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ 29 ವರ್ಷದ ಯುವಕ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಜನವರಿ 20ರಿಂದ ಜ್ವರ ಕಾಣಿಸಿಕೊಂಡಿದ್ದ ವ್ಯಕ್ತಿಯನ್ನು ಮೊದಲಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಂತರ ರಕ್ತ ಪರೀಕ್ಷೆಯಲ್ಲಿ ವೈರಲ್ ಸೋಂಕಾದ KFD ದೃಢಪಟ್ಟಿರುವುದು ವರದಿಯಾಗಿದೆ.

ಆರೋಗ್ಯ ಅಧಿಕಾರಿಗಳ ಪ್ರಕಾರ, ಸಾಮಾನ್ಯವಾಗಿ KFD ಅನ್ನು ಆರಂಭದಲ್ಲೇ ಪತ್ತೆಹಚ್ಚಿದರೆ ಹೆಚ್ಚಿನವರು ಚೇತರಿಸಿಕೊಳ್ಳುತ್ತಾರೆ. ಆದರೆ ಈ ಪ್ರಕರಣದಲ್ಲಿ ಆರಂಭಿಕ ಹಂತದಲ್ಲಿ ಸ್ಥಿತಿ ಸ್ಥಿರವಾಗಿದ್ದರೂ, ಕೆಲ ದಿನಗಳ ಬಳಿಕ ಅಚಾನಕ್ ಆರೋಗ್ಯ ಕುಸಿತ ಉಂಟಾಗಿ ಸಾವಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಬಳಿಕ ಮಲೆನಾಡು ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ನಿಗಾವ್ಯವಸ್ಥೆಯನ್ನು ತೀವ್ರಗೊಳಿಸಿದ್ದು, ಸುತ್ತಮುತ್ತಲ ಗ್ರಾಮಗಳಲ್ಲಿ ಜ್ವರ, ತಲೆನೋವು, ದೇಹನೋವು ಸೇರಿದಂತೆ ಲಕ್ಷಣಗಳಿರುವವರ ಮೇಲೆ ನಿಗಾ ವಹಿಸಲಾಗಿದೆ.
ಇದನ್ನೂ ಓದಿ : Giraffe Death : ಮೈಸೂರು ಮೃಗಾಲಯದ ಯುವರಾಜ ಇನ್ನಿಲ್ಲ
ಮಂಕಿ ಫೀವರ್ ಎಂದರೇನು?
ಮಂಕಿ ಫೀವರ್ ಅನ್ನು ವೈದ್ಯಕೀಯವಾಗಿ ಕ್ಯಾಸನೂರು ಅರಣ್ಯ ರೋಗ (Kyasanur Forest Disease – KFD) ಎಂದು ಕರೆಯಲಾಗುತ್ತದೆ. ಇದು ಫ್ಲೇವಿವೈರಸ್ ಎಂಬ ವೈರಸ್‌ನಿಂದ ಉಂಟಾಗುವ ಗಂಭೀರ ರಕ್ತಸ್ರಾವ ಜ್ವರ (viral haemorrhagic fever) ಆಗಿದ್ದು, ಮುಖ್ಯವಾಗಿ ಚಿಟಿಕೆ ಹುಳು ಕಚ್ಚುವಿಕೆಯಿಂದ ಹರಡುತ್ತದೆ. ಈ ರೋಗವು ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಈ ರೋಗದ ಲಕ್ಷಣಗಳು ; ತೀವ್ರ ಜ್ವರ, ತಲೆನೋವು, ದೇಹ ಮತ್ತು ಸಂಧಿ ನೋವು, ವಾಂತಿ, ಅಜೀರ್ಣ, ಕೆಲವರಲ್ಲಿ ರಕ್ತಸ್ರಾವ, ಗಂಭೀರ ಪ್ರಕರಣಗಳಲ್ಲಿ ಅಂಗಾಂಗ ವೈಫಲ್ಯ ಕಂಡುಬರುತ್ತದೆ. ಈ ವರ್ಷದ ಮೊದಲ ಸಾವಿನ ಹಿನ್ನೆಲೆ, ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದು, ಬೇಗ ಚಿಕಿತ್ಸೆ ಪಡೆಯುವುದೇ ಜೀವ ಉಳಿಸುವ ಪ್ರಮುಖ ಮಾರ್ಗ ಎಂದು ತಿಳಿಸಿದೆ.
ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

