ಸಂಪಾಜೆ : ಮಾನವೀಯತೆ ಎನ್ನುವುದು ಮಾನವನೊಳಗಿನ ಅತ್ಯಂತ ಶ್ರೇಷ್ಠ ಗುಣ. ಅದು ಜಾತಿ, ಧರ್ಮ, ಭಾಷೆ, ದೇಶಗಳ ಗಡಿಗಳನ್ನು ಮೀರಿದ ಒಂದು ವಿಶ್ವವ್ಯಾಪಿ ಮೌಲ್ಯ. ಇನ್ನೊಬ್ಬರ ನೋವನ್ನು ನಮ್ಮದೇ ನೋವಂತೆ ಅರಿತು ಸ್ಪಂದಿಸುವ ಮನಸ್ಸೇ ಮಾನವೀಯತೆ. ಈ ಗುಣವೇ ಮಾನವನನ್ನು ಇತರ ಜೀವಿಗಳಿಗಿಂತ ವಿಭಿನ್ನವಾಗಿಸುತ್ತದೆ.
ಮಾನವೀಯತೆಯನ್ನು ಮೆರೆದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ;

ಮಾನವೀಯತೆ ಕೇವಲ ದೊಡ್ಡ ಕಾರ್ಯಗಳಲ್ಲಿ ಮಾತ್ರವಲ್ಲ, ಸಣ್ಣ ಸಣ್ಣ ನಡೆಗಳಲ್ಲಿ ಸಹ ವ್ಯಕ್ತವಾಗುತ್ತದೆ. ಹಸಿದವನಿಗೆ ಅನ್ನ ನೀಡುವುದು, ದುಃಖಿತನಿಗೆ ಧೈರ್ಯ ತುಂಬುವುದು, ಅಸಹಾಯಕರಿಗೆ ನೆರವಾಗುವುದು, ವೃದ್ಧರನ್ನು ಗೌರವಿಸುವುದು ಇವೆಲ್ಲವೂ ಮಾನವೀಯತೆಯ ಪ್ರತೀಕಗಳಾಗಿವೆ. ನಮ್ಮ ಸುತ್ತಮುತ್ತಲಿನವರ ಜೀವನದಲ್ಲಿ ಸ್ವಲ್ಪ ಸಂತೋಷ ತರಲು ನಾವು ಮಾಡುವ ಸಣ್ಣ ಪ್ರಯತ್ನವೂ ಮಹತ್ತರ ಪರಿಣಾಮ ಬೀರುತ್ತದೆ. ಹೌದು….! ಮಡಿಕೇರಿ ತಾಲೂಕಿನ ಸಂಪಾಜೆ ಗ್ರಾಮದಲ್ಲಿ ಮಾನವೀಯತೆಯನ್ನು ಮೆರೆದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಜಾತಿ, ಧರ್ಮ ಅಂತ ನೋಡದೆ ವ್ಯಕ್ತಿಯ ಜೀವ ಉಳಿಸಲು ಹರಸಾಹಸ ಪಟ್ಟಿದ್ದಾರೆ.
ತಮ್ಮದೇ ಕಾರಿನಲ್ಲಿ ಸಂಪಾಜೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ;

ಬಾಡಿಗೆ ಮನೆ ವಿಚಾರಿಸಲು ಮನೆಯೊಂದರ ಬಳಿ ಬಂದ ಸಂಪಾಜೆಯ ಅಯ್ಯಪ್ಪ ಭಕ್ತರು, ಅಲ್ಲಿ ಮನೆಯೊಂದರ ಜಗುಲಿಯಲ್ಲಿ ಮಲಗಿದ್ದ ನಿಶ್ಯಕ್ತಿಯಲ್ಲಿದ್ದ ವೇಲೇರಿಯನ್ ಡಿಸೋಜ ಅವರನ್ನು ಕಂಡು ಅವರ ಜೀವ ಉಳಿಸಲು ಪರದಾಡಿದ್ದಾರೆ. ಈ ಇಬ್ಬರು ಹಿಂದು ಮುಂದು ನೋಡದೇ ಆ ವ್ಯಕ್ತಿಯ ಜೀವ ಉಳಿಸಲು ತಮ್ಮದೇ ಕಾರಿನಲ್ಲಿ ಸಂಪಾಜೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿಸಿದ್ದಾರೆ. ಅಲ್ಲದೆ, ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರ ಸಲಹೆ ನೀಡಿದ್ದರು, ರೋಗಿಯ ಸಂಬಂಧಿಕರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಅಂಬ್ಯುಲನ್ಸ್ ಕರೆಮಾಡಿ ಸುಳ್ಯ ತಾಲೂಕು ಆಸ್ಪತ್ರೆಗೆ ರೋಗಿಯನ್ನು ಕರೆತಂದರೂ ಜೀವ ಉಳಿಸಿಕೊಳ್ಳಲಾಗಿಲ್ಲ.
ತಾವು ಕರೆತಂದ ರೋಗಿಯು ಮೃತಪಟ್ಟಿದ್ದಾರೆ ಎಂದು ತಿಳಿದು ಮರುಗಿದ ಹಾಗೂ ಮೃತದೇಹ ಸಂಬಂಧ ಪಟ್ಟವರು ಬಂದು ಸ್ವೀಕರಿಸುವವರೆಗೂ ಮೃತರ ಪಕ್ಕದಲ್ಲೇ ಉಳಿದಿದ್ದ ಇಬ್ಬರು ಅಯ್ಯಪ್ಪ ಭಕ್ತರು, ದೀಪಕ್ ಪೇರಡ್ಕ ಹಾಗೂ ವಿಖ್ಯಾತ್ ಕಾಲಪ್ಪಕಜೆ ಚೆಂಬು ಎಂದು ಹೇಳಲಾಗಿದೆ. ಇವರ ಮಾನವೀಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಮಾನವೀಯ ಮನಸ್ಸುಗಳು ಸಂಪಾಜೆಯಲ್ಲಿ ಸತ್ತಿಲ್ಲ ಎಂದು ಸಾಬೀತು ಪಡಿಸಿದ ಸ್ವಾಮಿಗಳು ಎಂಬಿತ್ಯಾದಿ ಶ್ಲಾಘನೆಗಳು ಕೇಳಿಬರುತ್ತಿವೆ.

