ಸುಳ್ಯ: ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಅರಂತೋಡು ಭಾಗದಲ್ಲಿ ಆನೆಗಳ ಹಿಂಡು ಬೀಡು ಬಿಟ್ಟಿದ್ದು, ಅಪಾರ ಬೆಳೆ ಹಾನಿಯಾಗಿವೆ. ಜ.31 ರಂದು ಎರಡು ಸಣ್ಣ ಮರಿಗಳು ಸೇರಿದಂತೆ ಒಟ್ಟು ಆರು ಕಾಡಾನೆಗಳು ವಾಹನ ಸವಾರರಿಗೆ ಕಾಣಸಿಕ್ಕಿದ್ದು, ಇಂದು ಬೆಳಗ್ಗೆ 8:45 ರ ಸುಮಾರಿಗೆ ಕಾಡಾನೆಗಳು ಸಾರ್ವಜನಿಕರ ಕಣ್ಣಿಗೆ ಬಿದ್ದಿವೆ. ಇದರಿಂದಾಗಿ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಇದನ್ನೂ ಓದಿ : ಟೆನ್ನಿಸ್ ದಿಗ್ಗಜ ಜೊಕೊವಿಕ್ ರನ್ನು ಸೋಲಿಸಿ ಇತಿಹಾಸ ಸೃಷ್ಟಿಸಿದ ಅಲ್ಕರಾಜ್


ಆರಂತೋಡಿನ ಅಡ್ತಲೆ, ಕಿರ್ಲಾಯ, ಪೂಜಾರಿಮನೆ, ಹಾಸ್ಪರೆ, ಚುಕ್ರಡ್ಕ, ಬೆದ್ರುಪಣೆ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಜೋರಾಗಿದೆ. ಕಳೆದ ಒಂದು ತಿಂಗಳಿನಿಂದ ಕಾಡಾನೆಗಳ ದಾಳಿಯಿಂದ ಕೃಷಿಕರು ತತ್ತರಿಸಿದ್ದಾರೆ. ಹೇಳಿ ಕೇಳಿ ಹಳದಿ ರೋಗ, ಎಲೆಚುಕ್ಕಿ ಸೇರಿದಂತೆ ಅನೇಕ ರೋಗಗಳಿಂದ ಅಪಾರ ಪ್ರಮಾಣದಲ್ಲಿ ಅಡಕೆ ಬೆಳೆ ನಾಶಗೊಂಡಿದೆ. ಈ ನಡುವೆ ಆನೆಗಳು ಕೃಷಿ ತೋಟಗಳಿಗೆ ನುಗ್ಗಿ ಬೆಳೆ ನಾಶಗೊಳಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದೆಡೆ ಕಳೆದ ಬಾರಿಯ ಹವಾಮಾನ ಆಧಾರಿತ ಬೆಳೆ ವಿಮೆ ಸಿಕ್ಕಿಲ್ಲ. ಇನ್ನೊಂದೆಡೆ ರೋಗ ಬಾಧೆಯ ಜೊತೆಗೆ ಆನೆಗಳ ಹಾವಳಿ. ಒಟ್ಟಾರೆಯಾಗಿ ಸುಳ್ಯ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಅರಣ್ಯ ಇಲಾಖೆ ಆನೆಗಳನ್ನು ಹಿಡಿದು ಸ್ಥಳಾಂತರಿಸುವಂತೆ ಹಾಗೂ ಆನೆ ದಾಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ವಿಡಿಯೋ ಇಲ್ಲಿದೆ ;
ಸೋಲಾರ್ ಬೇಲಿ ಅಳವಡಿಕೆಗೆ ಸುಳ್ಯ ಶಾಸಕಿ ಒತ್ತಾಯ ;
ವಿಧಾನಸಭೆ ಅಧಿವೇಶನದಲ್ಲಿ ಕಾಡಾನೆಗಳ ಹಾವಳಿ ಬಗ್ಗೆ ಪ್ರಸ್ತಾಪಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕಾಡಾನೆಗಳ ದಾಳಿಯಿಂದ ಕೃಷಿ ಬೆಳೆ ನಾಶಗೊಂಡು ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೋಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಅಲ್ಲದೆ, ಕಾಡಾನೆಗಳು ಕೃಷಿ ಜಮೀನಿಗೆ ಬರದಂತೆ ತಡೆಯಲು ಸರ್ಕಾರವೇ ಶೇ.100 ರಷ್ಟು ವೆಚ್ಚ ಭರಿಸಿ ಸೋಲಾರ್ ಬೇಲಿ ಅಳವಡಿಸಬೇಕು ಎಂದು ಶಾಸಕಿ ಮುರುಳ್ಯ ಅವರು ಆಗ್ರಹಿದ್ದಾರೆ.

ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

