ಐಸಿಸಿ ಪುರುಷರ ಟಿ20 ವಿಶ್ವಕಪ್ ಮತ್ತೆ ಉಪಖಂಡಕ್ಕೆ ಮರಳುತ್ತಿರುವ ಹಿನ್ನೆಲೆಯಲ್ಲಿ, ಈ ಬಾರಿ ಬಹುಮಾನ ಮೊತ್ತದ ಕುರಿತ ನಿರೀಕ್ಷೆಗಳು ಭಾರೀ ಮಟ್ಟದಲ್ಲಿ ಹೆಚ್ಚಾಗಿವೆ. 2016ರ ನಂತರ ಮೊದಲ ಬಾರಿಗೆ ಉಪಖಂಡದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2026ಕ್ಕೆ ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಲಿದ್ದು, ಫೆಬ್ರವರಿ 7 ರಿಂದ ಮಾರ್ಚ್ 8ರ ವರೆಗೆ ಟೂರ್ನಮೆಂಟ್ ನಡೆಯಲಿದೆ.
ವರದಿಗಳ ಪ್ರಕಾರ, 2026ರ ಟಿ20 ವಿಶ್ವಕಪ್ ಐಸಿಸಿಯ ಇತಿಹಾಸದಲ್ಲೇ ಅತ್ಯಂತ ವಾಣಿಜ್ಯಾತ್ಮಕವಾಗಿ ಮಹತ್ವದ ಟೂರ್ನಮೆಂಟ್‌ಗಳಲ್ಲೊಂದು ಆಗುವ ಸಾಧ್ಯತೆ ಇದೆ. ಭಾರತೀಯ ಪ್ರಸಾರ ಹಕ್ಕು ಒಪ್ಪಂದಗಳು, ಪ್ರಾಯೋಜಕ ಮೌಲ್ಯ ಮತ್ತು ಅಭಿಮಾನಿಗಳ ನಿರಂತರ ಆಸಕ್ತಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಈವರೆಗೆ ಐಸಿಸಿ ಅಧಿಕೃತವಾಗಿ ಬಹುಮಾನ ಮೊತ್ತದ ವಿವರಗಳನ್ನು ಪ್ರಕಟಿಸಿಲ್ಲ. ಆದರೆ ವರದಿಗಳ ಪ್ರಕಾರ, 2024ರ ಆವೃತ್ತಿಗೆ ಹೋಲಿಸಿದರೆ 2026ರ ಟೂರ್ನಮೆಂಟ್‌ನಲ್ಲಿ ಒಟ್ಟು ಬಹುಮಾನ ಮೊತ್ತದಲ್ಲಿ ಸುಮಾರು ಶೇಕಡಾ 20 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಈ ಅಂದಾಜುಗಳು ಸತ್ಯವಾದರೆ, ಒಟ್ಟು ಬಹುಮಾನ ನಿಧಿ 11.25 ಮಿಲಿಯನ್ ಡಾಲರ್‌ಗಳಿಂದ, ಅಂದರೆ ಸುಮಾರು 100 ಕೋಟಿ ರೂಪಾಯಿಗಳಿಂದ ಸುಮಾರು 120 ಕೋಟಿ ರೂಪಾಯಿಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಅದೇ ರೀತಿಯಲ್ಲಿ, ಚಾಂಪಿಯನ್ ತಂಡಕ್ಕೆ ದೊರಕುವ ಬಹುಮಾನ ಮೊತ್ತವು 27 ಕೋಟಿಯಿಂದ 28 ಕೋಟಿ ರೂಪಾಯಿಗಳಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಇತರ ಎಲ್ಲಾ ಸ್ಥಾನಗಳಿಗೂ ಅನುಗುಣವಾಗಿ ಬಹುಮಾನ ಮೊತ್ತ ಹೆಚ್ಚಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ಭಾರತದ ವಿರುದ್ಧದ ಪಂದ್ಯವನ್ನು ಪಾಕ್ ಬಹಿಷ್ಕರಿಸಿದರೆ ಶ್ರೀಲಂಕಾದ ಮೇಲೆ ಆಗುವ ಪರಿಣಾಮ
ರನ್ನರ್‌ಅಪ್ ತಂಡಕ್ಕೆ 14 ಕೋಟಿ, ಸೆಂಮಿಫೈನಲ್‌ನಲ್ಲಿ ಸೋತ ತಂಡಗಳಿಗೆ 7 ಕೋಟಿ ರೂ., 5-12 ನೇ ಸ್ಥಾನ ಪಡೆದ ತಂಡಗಳಿಗೆ 3 ಕೋಟಿ ರೂ. ಹಾಗೂ ಭಾಗವಹಿಸಿದ ತಂಡಗಳಿಗೆ 2 ಕೋಟಿ ರೂಪಾಯಿ ನೀಡುವ ಸಾಧ್ಯತೆ ಇದೆ.
ಹಾಲಿ ಚಾಂಪಿಯನ್ ಭಾರತ ತಂಡವು 2024ರಲ್ಲಿ ಪ್ರಶಸ್ತಿ ಗೆದ್ದಿರುವುದರಿಂದ, ಈ ಬಾರಿ ಟೂರ್ನಮೆಂಟ್‌ಗೆ ಆತಿಥ್ಯ ವಹಿಸುವ ಲಾಭವೂ ಸೇರಿ, ಹೆಚ್ಚಿನ ಬಹುಮಾನ ಪಡೆಯುವ ನಿರೀಕ್ಷೆ ಮತ್ತಷ್ಟು ಬಲವಾಗಿದೆ.
ಗಮನಾರ್ಹವಾಗಿ, 2024ರ ಟಿ20 ವಿಶ್ವಕಪ್‌ನಲ್ಲಿ ಐಸಿಸಿ ಇತಿಹಾಸದಲ್ಲೇ ಗರಿಷ್ಠ ಬಹುಮಾನ ಮೊತ್ತ ಘೋಷಿಸಲಾಗಿತ್ತು. ಆ ಟೂರ್ನಮೆಂಟ್‌ನಲ್ಲಿ ಒಟ್ಟು ಬಹುಮಾನ ನಿಧಿ 11.25 ಮಿಲಿಯನ್ ಡಾಲರ್ ಆಗಿತ್ತು. ಚಾಂಪಿಯನ್ ತಂಡಕ್ಕೆ 2.45 ಮಿಲಿಯನ್ ಡಾಲರ್, ರನ್ನರ್ಸ್‌ಅಪ್‌ಗೆ 1.28 ಮಿಲಿಯನ್ ಡಾಲರ್ ನೀಡಲಾಗಿತ್ತು.
ಸೆಮಿಫೈನಲ್‌ನಲ್ಲಿ ಸೋತ ತಂಡಗಳು ತಲಾ 7 ಲಕ್ಷ 87 ಸಾವಿರ 500 ಡಾಲರ್ ಪಡೆದುಕೊಂಡಿದ್ದವು. ಐದರಿಂದ ಎಂಟನೇ ಸ್ಥಾನ ಪಡೆದ ತಂಡಗಳಿಗೆ 3 ಲಕ್ಷ 82 ಸಾವಿರ 500 ಡಾಲರ್, ಒಂಬತ್ತರಿಂದ ಹನ್ನೆರಡನೇ ಸ್ಥಾನ ಪಡೆದ ತಂಡಗಳಿಗೆ 2 ಲಕ್ಷ 47 ಸಾವಿರ 500 ಡಾಲರ್ ಹಾಗೂ 13ರಿಂದ 20ನೇ ಸ್ಥಾನದಲ್ಲಿದ್ದ ತಂಡಗಳಿಗೆ ತಲಾ 2 ಲಕ್ಷ 25 ಸಾವಿರ 500 ಡಾಲರ್ ಬಹುಮಾನ ನೀಡಲಾಗಿತ್ತು. ಇದರ ಜೊತೆಗೆ ಪಂದ್ಯ ಗೆಲುವಿನ ಬೋನಸ್‌ಗಳೂ ಸೇರಿದ್ದವು.
ಇದನ್ನೂ ಓದಿ: ಭಾರತದ ವಿರುದ್ಧ ಪಂದ್ಯ ಆಡದಿದ್ದರೆ ಪಾಕಿಸ್ತಾನದ ಮೇಲೆ ಆಗುವ ಐದು ಪರಿಣಾಮಗಳು
ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚಾಂಪಿಯನ್ ಆಗಿದ್ದ ಭಾರತ ತಂಡವು ಸುಮಾರು 20.4 ಕೋಟಿ ರೂಪಾಯಿಗಳ ಬಹುಮಾನ ಮೊತ್ತವನ್ನು ಪಡೆದಿತ್ತು. ಇದು ಆ ಸಮಯದಲ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿಹೆಚ್ಚು ಬಹುಮಾನವಾಗಿತ್ತು.
ವರದಿಯಾದಂತೆ ಶೇಕಡಾ 20 ಹೆಚ್ಚಳ ದೃಢಪಟ್ಟರೆ, 2026ರ ಟಿ20 ವಿಶ್ವಕಪ್ ಟೂರ್ನಮೆಂಟ್ ಹೊಸ ಆರ್ಥಿಕ ಗರಿಷ್ಠ ಮಟ್ಟವನ್ನು ತಲುಪಲಿದೆ. ಆದರೆ ಐಸಿಸಿ ಅಧಿಕೃತ ಘೋಷಣೆ ಹೊರಬರುವವರೆಗೆ, ಈ ಎಲ್ಲಾ ಅಂಕಿ-ಅಂಶಗಳು ಅಂದಾಜಿನ ಮಟ್ಟದಲ್ಲೇ ಇರಲಿವೆ ಎಂಬುದನ್ನು ಗಮನಿಸಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

