ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಗೆ ಎದುರಾಗಿದ್ದ ನವೆಂಬರ್ ಕ್ರಾಂತಿಯನ್ನು ಯಶಸ್ವಿಯಾಗಿ ಎದುರಿಸಿ ಮುನ್ನಡೆದ ಸಿದ್ದರಾಮಯ್ಯರವರಿಗೆ ಇದೀಗ ಸಂಕ್ರಾಂತಿ ಕ್ರಾಂತಿಯ ಭೀತಿ ಶುರುವಾಗಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್ ಎರಡೂವರೆ ವರ್ಷದ ಅಧಿಕಾರ ಹಂಚಿಕೆಯ ಸೂತ್ರ ಹೆಣೆಯಲಾಗಿತ್ತು. ಅದರಂತೆ ಸಿದ್ದರಾಮಯ್ಯರ ಎರಡೂವರೆ ವರ್ಷ ಮುಕ್ತಾಯಗೊಂಡಿದ್ದು, ಡಿಕೆ ಶಿವಕುಮಾರ್ ಅವರು ಪಟ್ಟ ಏರಲು ಪಣ ತೊಟ್ಟಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಮುಖ್ಯಮಂತ್ರಿ ಕುರ್ಚಿಗಾಗಿ ಹಗ್ಗಜಗ್ಗಾಟ ನಡೆಯುತ್ತಿದ್ದು, ನವೆಂಬರ್ ತಿಂಗಳಲ್ಲಿ ಕ್ರಾಂತಿಯಾಗಲಿದೆ ಎಂದು ಸ್ವಪಕ್ಷದ ಕೆಎನ್ ರಾಜಣ್ಣ ಹೇಳಿದ ನಂತರ ಸಿಎಂ ಬದಲಾವಣೆಯ ಚರ್ಚೆ ಜೋರಾಯಿತು.

ನವೆಂಬರ್ ಕ್ರಾಂತಿಯನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿದ ಸಿದ್ದರಾಮಯ್ಯ ಅವರಿಗೆ ಇದೀಗ ಸಂಕ್ರಾಂತಿ ಕ್ರಾಂತಿ ಎದುರಾಗಿದ್ದು, ಹಬ್ಬದ ವೇಳೆಯಲ್ಲಿ ಸಿಎಂ ಕುರ್ಚಿ ಅಲುಗಾಡಲಿದೆ ಎನ್ನಲಾಗಿದೆ. ಅಲ್ಲದೆ ಸಂಪುಟ ಪುನರ್ ರಚನೆಯಾಗಲಿದೆ ಎಂದೂ ಹೇಳಲಾಗುತ್ತಿದೆ.
ನವೆಂಬರ್ ಕ್ರಾಂತಿ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ ಇದೀಗ ಸಂಕ್ರಾಂತಿ ಗಡುವು ಮುನ್ನಲೆಗೆ ಬಂದಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸಿಎಂ ಸ್ಥಾನಕ್ಕೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಸಂಪುಟಕ್ಕೆ ಮೇಜರ್ ಸರ್ಜರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಸುಮಾರು 8-10 ಮಂದಿ ಸಚಿವರನ್ನ ಸಂಪುಟದಿಂದ ಕೈಬಿಟ್ಟು ಹೊಸ ಮುಖಗಳಿಗೆ ಹಾಗೂ ಹಿರಿಯ ಶಾಸಕರಿಗೆ ಮಂತ್ರಿಗಿರಿ ನೀಡುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ.
ಸಚಿವರ ಸಾಮರ್ಥ್ಯದ ವರದಿ ತರಿಸಿಕೊಂಡ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಅದನ್ನು ವರಿಷ್ಠರ ಗಮಕ್ಕೂ ತಂದಿದ್ದರೆ. ಸಚಿವರ ಎರಡು ವರ್ಷಗಳ ಕಾರ್ಯವೈಖರಿ ಹೇಗಿದೆ ಎಂಬುದನ್ನು ಪರಿಶೀಲಿಸಲಿರುವ ಕಾಂಗ್ರೆಸ್ ಹೈಕಮಾಂಡ್, ಕೆಲವರಿಗೆ ಕೋಕ್ ನೀಡುವ ಸಾಧ್ಯತೆ ಇದೆ.
ಬಿಕೆ ಹರಿಪ್ರಸಾದ್, ಅನಿಲ್ ಚಿಕ್ಕಮಾದು, ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್, ಬಿ.ಆರ್.ಪಾಟೀಲ, ಟಿ.ರಘುಮೂರ್ತಿ, ಬಿ.ಕೆ. ಸಂಗಮೇಶ್, ತನ್ವೀರ್ ಸೇಠ್, ಅಜಯ್ ಸಿಂಗ್ ಸೇರಿದಂತೆ ಅನೇಕರ ಕಾರ್ಯವೈಖರಿಯನ್ನು ಪರಿಶೀಲಿಸಿ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.
ಸಚಿವ ಸ್ಥಾನ ಕಳೆದುಕೊಳ್ಳವ ಭೀತಿ
ಸಂಕ್ರಾಂತಿ ಕ್ರಾಂತಿ ಸಮಿಪಿಸುತ್ತಿದ್ದು, ಎಂ.ಸಿ. ಸುಧಾಕರ್, ರಹೀಂ ಖಾನ್, ಎನ್.ಎಸ್. ಬೋಸರಾಜು, ಕೆ.ಎಚ್. ಮುನಿಯಪ್ಪ, ಡಿ. ಸುಧಾಕರ್, ಮಧು ಬಂಗಾರಪ್ಪ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಶಿವಾನಂದ ಪಾಟೀಲ್ ಅವರಿಗೆ ಸಚಿವ ಸ್ಥಾನಕಲ ಕೈ ತಪ್ಪುವ ಭೀತಿ ಶುರುವಾಗಿದೆ. ಅದಾಗ್ಯೂ ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ನಿರ್ಣಯಿಸಲಿದೆ.

