Breaking News

“ಮಿಸ್ಟರ್‌ ಸಿಎಂ ನಾಟಕ ನಿಲ್ಲಿಸಿ” ವಿಶೇಷ ಟೀ-ಶರ್ಟ್‌ ಧರಿಸಿದ ತೇಜಸ್ವಿ ಸೂರ್ಯ; ದೆಹಲಿಗೆ ಓಡಿದ್ದು ಯಾಕೆ?

Tejaswi Surya wears special t-shirt to protest metro fare hike

ಬೆಂಗಳೂರು: ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಮೆಟ್ರೋ ದರ ಏರಿಕೆ ವಿರುದ್ಧ ಭಾನುವಾರ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ‘Mr CM, Cut the Drama’ (ಮಿಸ್ಟರ್‌ ಸಿಎಂ, ನಾಟಕ ನಿಲ್ಲಿಸಿ) ಮತ್ತು ‘Fare Hike Beda’ (ದರ ಏರಿಕೆ ಬೇಡ) ಎಂಬ ಬರಹವಿರುವ ಟೀ-ಶರ್ಟ್ ಧರಿಸಿದ ಅವರು, ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು.

ಬಿಎಂಆರ್‌ಸಿಎಲ್ ಪ್ರಸ್ತಾಪಿಸಿರುವ ವಾರ್ಷಿಕ ದರ ಪರಿಷ್ಕರಣೆ ಕುರಿತು ಮಾತನಾಡಿದ ತೇಜಸ್ವಿ ಸೂರ್ಯ, ಮೆಟ್ರೋ ದರ ಏರಿಕೆಯನ್ನು ತಾವು ಕೋರಿಲ್ಲ ಎಂಬ ಕಾಂಗ್ರೆಸ್ ಸರ್ಕಾರದ ಹೇಳಿಕೆಯನ್ನು ಪ್ರಶ್ನಿಸಿದರು‌. ಅಲ್ಲದೆ, ದರ ನಿರ್ಧಾರ ಸಮಿತಿ ವರದಿಯ ಆಯ್ದ ಭಾಗಗಳನ್ನು ತಮ್ಮ ಟೀ-ಶರ್ಟ್ ಮೇಲೆ ಮುದ್ರಿಸುವ ಮೂಲಕ, ರಾಜ್ಯ ಸರ್ಕಾರದ ಅಧಿಕಾರಿಗಳೇ ವಾರ್ಷಿಕ ದರ ಪರಿಷ್ಕರಣೆಗೆ ಒತ್ತಾಯಿಸಿದ್ದರು ಎಂಬುದನ್ನು ಬಯಲಿಗೆಳೆದರು.

Advertisement

ಎಫ್ಎಫ್‌ಸಿ ವರದಿಯನ್ನು ಉಲ್ಲೇಖಿಸಿದ ಸೂರ್ಯ, ರಾಜ್ಯ ಸರ್ಕಾರದ ಹಣಕಾಸು ಹಾಗೂ ನಗರಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳು, ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮೆಟ್ರೋ ದರ ಹೆಚ್ಚಳ ಅಗತ್ಯ ಎಂದು ಸಮಿತಿಯ ಗಮನಕ್ಕೆ ತಂದಿದ್ದರು ಎಂದು ಹೇಳಿದರು. ಅಲ್ಲದೆ, ಪ್ರತಿವರ್ಷ ಸ್ವಯಂಚಾಲಿತವಾಗಿ ದರ ಪರಿಷ್ಕರಣೆ ಮಾಡುವ ಸೂತ್ರ ಜಾರಿಗೆ ತರಬೇಕು ಎಂಬ ಅಭಿಪ್ರಾಯವನ್ನೂ ಅಧಿಕಾರಿಗಳು ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ: ಅಂಗನವಾಡಿ ಆಹಾರ ಗುಣಮಟ್ಟ ಕುಸಿತ, ಶಾಸಕಾಂಗ ಸಮಿತಿ ವರದಿ ಉಲ್ಲೇಖಿಸಿ ಸಿಎಂಗೆ ಪತ್ರ

ಸೋಮವಾರದಿಂದ ಜಾರಿಗೆ ಬರಲಿರುವ ಶೇ.5ರಷ್ಟು ದರ ಏರಿಕೆಯಿಂದ ತಮಗೆ ಎದುರಾಗುವ ಸಮಸ್ಯೆಗಳ ಬಗ್ಗೆ ಮೆಟ್ರೋ ಪ್ರಯಾಣಿಕರು ಅಳಲು ತೋಡಿಕೊಂಡರು. ಇದನ್ನು ಆಲಿಸಿದ ತೇಜಸ್ವಿ ಸೂರ್ಯ, ದರ ನಿಗದಿ ಸಮಿತಿಯನ್ನು ಪುನರ್ ರಚಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

“ಕಾಂಗ್ರೆಸ್ ಸರ್ಕಾರದ ಹಣಕಾಸು ದುರುಪಯೋಗದಿಂದಲೇ ಮೆಟ್ರೋ ದರ ಏರಿಕೆ ಅನಿವಾರ್ಯವಾಗಿದೆ. ಎಫ್ಎಫ್‌ಸಿ ವರದಿಯ ಮೂರನೇ ಅಧ್ಯಾಯದ ಒಂಬತ್ತನೇ ಪುಟ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಹೇಳಿದರು.

ದರ ಏರಿಕೆ ಮತ್ತು ವರದಿಯಲ್ಲಿನ ಲೋಪದೋಷಗಳ ಬಗ್ಗೆ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರ ಗಮನಕ್ಕೂ ತರಲಾಗಿದೆ ಎಂದು ಹೇಳಿದ ತೇಜಸ್ವಿ ಸೂರ್ಯ, ಸಚಿವರು ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಹಾಗೂ ಬಿಎಂಆರ್‌ಸಿಎಲ್‌ನ ಲೋಪದೋಷಗಳನ್ನು ಪರಿಶೀಲಿಸಲು ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ದೆಹಲಿಗೆ ಓಡಿದ್ದು ಯಾಕೆ?

ನಾಳೆಯಿಂದ ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ತಡೆ ನೀಡಿದೆ ಎಂದು ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್‌, ಮೊದಲನೆಯದಾಗಿ, ನಮ್ಮ ಮೆಟ್ರೋ ದರ ಏರಿಕೆಯಲ್ಲಿ ಕೇಂದ್ರದ ಪಾತ್ರವಿಲ್ಲ ಎಂದು ತೇಜಸ್ವಿ ಸೂರ್ಯಅವರೇ ಹೇಳಿದ್ದರು. ಈಗ ದೆಹಲಿಗೆ ಓಡಿಹೋಗಿ ದರ ಏರಿಕೆಗೆ ಯಾಕೆ ತಾತ್ಕಾಲಿಕವಾಗಿ ತಡೆ ನೀಡಿ ಎಂದು ಕೇಳುತ್ತಿದ್ದಾರೆ. ನಿಮಗೆ ದರ ನಿಗದಿ ಮಾಡುವ, ಪರಿಷ್ಕರಿಸುವ ಅಧಿಕಾರ ಇಲ್ಲವೆಂದ ಮೇಲೆ ದರ ಏರಿಕೆಗೆ ತಡೆ ನೀಡಲು ನಿಮಗೆ ಹೇಗೆ ಅಧಿಕಾರವಿದೆ ಎಂದು ಪ್ರಶ್ನಿಸಿದೆ. ಅಲ್ಲದೆ, ಸಾರ್ವಜನಿಕರ ಆಕ್ರೋಶ ಹೆಚ್ಚಾದಾಗ ನೀವು ಜವಾಬ್ದಾರಿಯಿಂದ ಕೈ ತೊಳೆದುಕೊಂಡು ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು