ಬೆಂಗಳೂರು, ಫೆ.12: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ ಅವರನ್ನು ಇಂದು (ಫೆಬ್ರವರಿ 12, 2026) ಸಂಜೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಅವರು 5ನೇ ಆರೋಪಿಯಾಗಿದ್ದು, ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಈ ಬಂಧನ ಆಗಿದೆ. ಭೈರತಿ ಬಸವರಾಜ್ ಅವರು ಅಹಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇವನಹಳ್ಳಿ ಎಸಿಪಿ ಶ್ರೀಹರ್ಷ ನೇತೃತ್ವದ ತಂಡ ಅವರನ್ನು ವಶಕ್ಕೆ ಪಡೆಯಿತು.
ಬಂಧನದ ಬಳಿಕ ಅವರನ್ನು ಸಿಐಡಿ (CID) ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಲಾಗಿದೆ. ಇಂದು ಸಂಜೆ ಸುಮಾರು 6:45 ರ ಸುಮಾರಿಗೆ ಈ ಕಾರ್ಯಾಚರಣೆ ನಡೆದಿದೆ. ಜುಲೈ 15, 2025 ರಂದು ಬೆಂಗಳೂರಿನ ಭಾರತೀನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ವಿ.ಜಿ. ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನನ್ನು ಆತನ ಮನೆಯ ಮುಂದೆಯೇ ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು. ಈ ಕೊಲೆಯು ಕೌಟುಂಬಿಕ ಅಥವಾ ರಿಯಲ್ ಎಸ್ಟೇಟ್ ವ್ಯವಹಾರದ ದ್ವೇಷದ ಹಿನ್ನೆಲೆಯಲ್ಲಿ ನಡೆದಿದೆ ಎಂದು ಶಂಕಿಸಲಾಗಿದೆ. ಸೈಟ್ ವಿವಾದವೊಂದಕ್ಕೆ ಸಂಬಂಧಿಸಿದಂತೆ ಭೈರತಿ ಬಸವರಾಜ್ ಮತ್ತು ಅವರ ಬೆಂಬಲಿಗರು ಬಿಕ್ಲು ಶಿವನಿಗೆ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತನ ತಾಯಿ ವಿಜಯಲಕ್ಷ್ಮಿ ದೂರಿನಲ್ಲಿ ಆರೋಪಿಸಿದ್ದರು.

ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಬಸವರಾಜ್‌ಗೆ ಸುಪ್ರೀಂಕೋರ್ಟ್‌ನಲ್ಲೂ ಹಿನ್ನಡೆ
ಈ ಕೊಲೆಗೆ ಭೈರತಿ ಬಸವರಾಜ್ ಅವರ ಕುಮ್ಮಕ್ಕಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎಫ್‌ಐಆರ್‌ನಲ್ಲಿ ಅವರ ಹೆಸರನ್ನು 5ನೇ ಆರೋಪಿಯಾಗಿ (A5) ಸೇರಿಸಲಾಗಿತ್ತು. ಭೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ (ಫೆಬ್ರವರಿ 10) ವಜಾಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಶಾಸಕರಿಗೆ ಅಲ್ಲೂ ಹಿನ್ನಡೆಯಾಯಿತು. “ನೀವು ಜನಪ್ರತಿನಿಧಿ, ಧೈರ್ಯವಾಗಿ ತನಿಖೆ ಎದುರಿಸಿ” ಎಂದು ಸುಪ್ರೀಂ ಕೋರ್ಟ್ ಇಂದು ಬೆಳಿಗ್ಗೆ ಅವರ ಅರ್ಜಿಯನ್ನು ತಿರಸ್ಕರಿಸಿತ್ತು.
ಬಂಧನದ ಭೀತಿಯಿಂದಾಗಿ ಕಳೆದ ಕೆಲವು ದಿನಗಳಿಂದ ಶಾಸಕರು ನಾಪತ್ತೆಯಾಗಿದ್ದರು ಮತ್ತು ಅವರು ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಸಿಐಡಿ ಅಧಿಕಾರಿಗಳು ಈಗ ಶಾಸಕರನ್ನು ವಶಕ್ಕೆ ಪಡೆದಿದ್ದು, ನಾಳೆ ಅವರನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

