ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಯುವ ಎಂಬಿಎ ವಿದ್ಯಾರ್ಥಿನಿಯ ಕೊಲೆ ಪ್ರಕರಣವು ಸಿನಿಮಾ ಕಥೆಯನ್ನು ಮೀರಿಸುವಂತಹ ತಿರುವುಗಳನ್ನು ಪಡೆದುಕೊಂಡಿದೆ. ತನ್ನ ಪ್ರೇಯಸಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಪ್ರಿಯಕರನು ಅನುಸರಿಸಿದ ದಾರಿ ಪೊಲೀಸರನ್ನೇ ಅಚ್ಚರಿಗೊಳಿಸಿದೆ .ಆರೋಪಿ ಮತ್ತು ಸಂತ್ರಸ್ತೆ ಎಂಬಿಎ ಓದುತ್ತಿದ್ದ ಸಹಪಾಠಿಗಳು. ಮೂಲಗಳ ಪ್ರಕಾರ, ಯುವತಿಯ ವಾಟ್ಸಾಪ್ ಚಾಟ್ ಮತ್ತು ಆಕೆ ಬೇರೆಯವರ ಜೊತೆ ಸಂಪರ್ಕದಲ್ಲಿದ್ದಾಳೆ ಎಂಬ ಸಂಶಯವೇ ಈ ಕೊಲೆಗೆ ಪ್ರಚೋದನೆ ನೀಡಿದೆ ಎನ್ನಲಾಗಿದೆ.
ಹತ್ಯೆಯ ದಿನ ಆರೋಪಿಯು ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮದ್ಯ (ಬಿಯರ್) ಕುಡಿಸಿದ್ದಾನೆ. ಆಕೆ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಕ್ರೂರವಾಗಿ ಹತ್ಯೆ ಮಾಡಿದ್ದಾನೆ.ತನಿಖೆಯ ವೇಳೆ ಪೊಲೀಸರಿಗೆ ಅತ್ಯಂತ ಆಘಾತಕಾರಿ ವಿಷಯವೊಂದು ತಿಳಿದುಬಂದಿದೆ. ಆರೋಪಿಯು ಮಾಟಮಂತ್ರದ ಮೇಲೆ ಗಾಢ ನಂಬಿಕೆ ಹೊಂದಿದ್ದ ಎನ್ನಲಾಗಿದೆ. ಹತ್ಯೆಯ ನಂತರ ಆಕೆಯ ದೇಹದ ಮೇಲೆ ಕೆಲವು ವಿಚಿತ್ರ ಗುರುತುಗಳನ್ನು ಮಾಡಿದ್ದಲ್ಲದೆ, ಶವದ ಜೊತೆ ಕೆಲವು ವಿಧಿವಿಧಾನಗಳನ್ನು ಮಾಡಲು ಯತ್ನಿಸಿದ್ದ ಎಂಬ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ‘ಮದ್ಯದ ಪಾರ್ಟಿ’ ವೇಳೆ ರಕ್ತಪಾತ: ಸ್ನೇಹಿತನನ್ನೇ ವಿವಸ್ತ್ರಗೊಳಿಸಿ, ಕಲ್ಲು ಎತ್ತಿಹಾಕಿ ಕೊಂದ ಹಂತಕರು!
ಕೊಲೆಯ ನಂತರ ಆರೋಪಿಯು ಪೊಲೀಸರ ಕಣ್ಣಿಗೆ ಮಣ್ಣೆರಚಲು ಹಲವಾರು ಬಾರಿ ತನ್ನ ಮೊಬೈಲ್ ಲೊಕೇಶನ್ ಬದಲಿಸುತ್ತಾ ವಿವಿಧ ನಗರಗಳಿಗೆ ಓಡಿಹೋಗಿದ್ದ. ಆದರೆ ಆತ ಬಿಟ್ಟುಹೋಗಿದ್ದ ಸಣ್ಣ ಸುಳಿವುಗಳನ್ನು ಹಿಂಬಾಲಿಸಿದ ಪೊಲೀಸರು ಅಂತಿಮವಾಗಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಸದ್ಯ ಯುವತಿಯ ಫೋನ್ ವಶಪಡಿಸಿಕೊಂಡಿದ್ದು, ಡಿಲೀಟ್ ಆಗಿರುವ ವಾಟ್ಸಾಪ್ ಸಂದೇಶಗಳನ್ನು ಮರುಪಡೆಯಲು ಮುಂದಾಗಿದ್ದಾರೆ. ಇದು ಕೇವಲ ಪ್ರೇಮ ವೈಫಲ್ಯವೇ ಅಥವಾ ಇದರ ಹಿಂದೆ ದೊಡ್ಡ ಮಟ್ಟದ ಮಾಟಮಂತ್ರದ ಜಾಲವಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

