ಬಂಟ್ವಾಳ: ವಿಟ್ಲ ಸಮೀಪದ ಕೇಪು ಗ್ರಾಮದ ಯುವ ವಕೀಲ ಮನೋಜ್ ಕುಮಾರ್ ಯು ಅವರು ಕಿರಿಯ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯ ವತಿಯಿಂದ 2025ನೇ ಸಾಲಿನ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅವರು ಯಶಸ್ಸು ಸಾಧಿಸಿದ್ದಾರೆ.
2025ರ ಅಕ್ಟೋಬರ್‌ನಲ್ಲಿ ಪ್ರಾಥಮಿಕ ಪರೀಕ್ಷೆ, ಡಿಸೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ಮತ್ತು 2026ರ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ನೇರ ಸಂದರ್ಶನ ಸೇರಿದಂತೆ ಮೂರು ಹಂತಗಳ ಕಠಿಣ ಆಯ್ಕೆ ಪ್ರಕ್ರಿಯೆಗಳನ್ನು ಸಮರ್ಥವಾಗಿ ಪೂರೈಸಿ ಅವರು ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಶಿವಪ್ಪ ಮತ್ತು ಶಶಿಕಲಾ ದಂಪತಿಯ ಪುತ್ರರಾದ ಮನೋಜ್ ಕುಮಾರ್ ಯು ಅವರು ಕಳೆದ ಏಳು ವರ್ಷಗಳಿಂದ ಪುತ್ತೂರಿನ ಖ್ಯಾತ ವಕೀಲ ಕೆ. ನಾಗೇಶ್ ಶರ್ಮ ಅವರ ಬಳಿ ಕಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಎರಡು ವರ್ಷಗಳಿಂದ ವಕೀಲ ಪ್ರಶಾಂತ್ ಪೂಜಾರಿ ಅವರೊಂದಿಗೆ ಸೇರಿ ವಿಟ್ಲದಲ್ಲಿ “ಪ್ರಮಾ ಅಸೋಸಿಯೇಟ್ಸ್” ಎಂಬ ಹೆಸರಿನಲ್ಲಿ ಸ್ವಂತ ಕಚೇರಿ ಆರಂಭಿಸಿ ವಕೀಲ ವೃತ್ತಿಯಲ್ಲಿ ಸಕ್ರಿಯರಾಗಿದ್ದರು.
ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ, ಪಿಯುಸಿ ವೇಳಾಪಟ್ಟಿ ಪ್ರಕಟ; ಪಿಯು ಫಲಿತಾಂಶ ಯಾವಾಗ?
ಅವರ ಪ್ರಾಥಮಿಕ ಶಿಕ್ಷಣ ಪಡಿಬಾಗಿಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ನಂತರ ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ವಕೀಲ ವೃತ್ತಿಗೆ ಪ್ರವೇಶಿಸಿದರು.
ಗ್ರಾಮೀಣ ಹಿನ್ನೆಲೆಯಿಂದ ಬಂದು ಯುವ ವಕೀಲನಾಗಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವುದು ವಿಶೇಷವಾಗಿದ್ದು, ಗ್ರಾಮೀಣ ವಿದ್ಯಾರ್ಥಿಗಳು ಹಾಗೂ ಯುವ ವಕೀಲರಿಗೆ ಅವರು ಪ್ರೇರಣೆಯಾಗಿದ್ದಾರೆ. ಅವರ ಸಾಧನೆಗೆ ವಿವಿಧ ಸಂಘಟನೆಗಳು, ವಕೀಲರು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

