ಪುತ್ತೂರು: ಬಡ ರೈತ ಕುಟುಂಬದಲ್ಲಿ ಜನಿಸಿ ಬೆಳೆದ ಯುವತಿಯೊಬ್ಬಳು ಇದೀಗ ನ್ಯಾಯಾಧೀಶೆಯಾಗಿರುವುದು ಹೆಮ್ಮೆಯ ಸಂಗತಿ. ತಂದೆ-ತಾಯಿಯ ಪರಿಶ್ರಮದಿಂದ ಪಡೆದ ಶಿಕ್ಷಣದ ಫಲ ಇದೀಗ ದೊರೆತಿದೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಕೆಯ್ಯೂರು ಗ್ರಾಮದ ಇಲಂತಾಜೆ ನಿವಾಸಿ ಶ್ರೀಧರ ಶೆಟ್ಟಿ ಹಾಗೂ ಹರಿಣಾಕ್ಷಿ ದಂಪತಿಯ ಪುತ್ರಿ ದೀಪಿಕಾ ಎಸ್ ಶೆಟ್ಟಿ, ೨೦೨೫ನೇ ಸಾಲಿನ ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆಯ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ೪ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಕಳೆದ ಆರು ವರ್ಷಗಳಿಂದ ನಿರಂತರವಾಗಿ ನ್ಯಾಯಾಂಗ ಪರೀಕ್ಷೆ ಬರೆಯುತ್ತಿದ್ದ ದೀಪಿಕಾ, ಆರನೇ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ್ದಾರೆ.

ಅವರು ೨೦೨೫ರ ಅಕ್ಟೋಬರ್‌ನಲ್ಲಿ ನಡೆದ ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಡಿಸೆಂಬರ್‌ನಲ್ಲಿ ನಡೆದ ಮುಖ್ಯ ಪರೀಕ್ಷೆಯನ್ನೂ ಯಶಸ್ವಿಯಾಗಿ ಪಾಸಾಗಿ, ಸಂದರ್ಶನದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಅಂತಿಮವಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಸುಳ್ಳು ಜಾಹೀರಾತು ಪ್ರಕರಣ: ರಾಹುಲ್ ಗಾಂಧಿಗೆ ಬಿಗ್ ರಿಲೀಫ್
ಬಾಲ್ಯದಿಂದಲೇ ಬಡತನದ ಕಷ್ಟಗಳನ್ನು ಅನುಭವಿಸಿದ್ದ ಅವರು, ಕೆಯ್ಯೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಕೆಯ್ಯೂರು ಸರ್ಕಾರಿ ಪಿಯು ಕಾಲೇಜಿನಲ್ಲಿ ಪಿಯುಸಿ ಹಾಗೂ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ ವಕೀಲ ವೃತ್ತಿ ನಿರ್ವಹಿಸುತ್ತಿದ್ದಾರೆ.
ಪಿಯುಸಿ ಮುಗಿಸಿದ ಬಳಿಕ ಅಚಾನಕ್ ನ್ಯಾಯಾಧೀಶೆಯಾಗಬೇಕೆಂಬ ಕನಸು ಮೂಡಿತು. ದಿನೇದಿನೇ ಆ ಕನಸು ಬಲವಾಗುತ್ತಾ ಬಂತು. ಕಾನೂನು ಪದವಿ ಪೂರ್ಣಗೊಳಿಸಿ ವಕೀಲ ವೃತ್ತಿ ಆರಂಭಿಸಿದ ಬಳಿಕವೂ ನ್ಯಾಯಾಧೀಶೆಯಾಗುವುದು ನನ್ನ ಗುರಿಯಾಗಿತ್ತು. ಆ ಕಾರಣದಿಂದಲೇ ಆರು ವರ್ಷಗಳ ಕಾಲ ನಿರಂತರವಾಗಿ ರಾಜ್ಯ ಮಟ್ಟದ ನ್ಯಾಯಾಂಗ ಪರೀಕ್ಷೆಗಳಿಗೆ ಹಾಜರಾದೆ. ಪ್ರತಿ ಬಾರಿ ವೈಫಲ್ಯ ಕಂಡಾಗಲೂ ಇನ್ನಷ್ಟು ಉತ್ಸಾಹದಿಂದ ಮತ್ತೆ ಪ್ರಯತ್ನಿಸುತ್ತಿದ್ದೆ ಎಂದು ದೀಪಿಕಾ ಹೇಳಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

