ಗಬ್ಬರ್ ಖ್ಯಾತಿಯ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ (Shikhar Dhawan) ಅವರು ತಮ್ಮ ದೀರ್ಘಕಾಲದ ಸಂಗಾತಿ ಐರಿಸ್ ಮೂಲದ ಸೋಫಿ ಶೈನ್ (Sophie Shine) ಅವರೊಂದಿಗೆ ಫೆಬ್ರವರಿ 21 ರಂದು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬ ಸದಸ್ಯರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಈ ಮದುವೆ ನೆರವೇರಿತು.
ಈ ಜೋಡಿ ಹಲವು ವರ್ಷಗಳಿಂದ ಪರಸ್ಪರ ಸಂಬಂಧದಲ್ಲಿದ್ದು, 2025ರ ಮೇ ತಿಂಗಳಲ್ಲಿ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಘೋಷಿಸಿದ್ದರು. ಈ ವರ್ಷ ಆರಂಭದಲ್ಲಿ ನಿಶ್ಚಿತಾರ್ಥದ ಸುದ್ದಿಯನ್ನೂ ಹಂಚಿಕೊಂಡಿದ್ದರು. ಹೀಗಾಗಿ ಅವರ ಮದುವೆ ಕುರಿತ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು.

2025ರ ಐಸಿಸಿ ಚಾಂಪಿಯನ್ ಟ್ರೋಫಿ ಟೂರ್ನಿಯ ವೇಳೆ ದುಬೈನಲ್ಲಿ ಈ ಜೋಡಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದಿದ್ದರು. ನಂತರ ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಧವನ್ ತಮ್ಮ ಜೀವನದಲ್ಲಿ ಮತ್ತೆ ಪ್ರೀತಿಯನ್ನು ಕಂಡುಕೊಂಡಿರುವುದಾಗಿ ಸುಳಿವು ನೀಡಿದ್ದರು.
ಇದನ್ನೂ ಓದಿ: T20 Worldcup: ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸಿದ ಆಸ್ಟ್ರೇಲಿಯಾ
ಇದಕ್ಕೂ ಮೊದಲು ಧವನ್ ಅವರು ಏಶ ಮುಖರ್ಜಿ ಅವರನ್ನು 2011ರಲ್ಲಿ ವಿವಾಹವಾಗಿದ್ದರು. ದಶಕಕ್ಕೂ ಹೆಚ್ಚು ಕಾಲದ ವೈವಾಹಿಕ ಜೀವನದ ಬಳಿಕ, 2023ರ ಅಕ್ಟೋಬರ್‌ನಲ್ಲಿ ಇಬ್ಬರೂ ಪ್ರತ್ಯೇಕಗೊಂಡಿದ್ದರು. ಇವರಿಗೆ ಜೋರಾವರ್ ಎಂಬ ಮಗನಿದ್ದು, ವಿಚ್ಛೇದನ ಪ್ರಕ್ರಿಯೆಯ ವೇಳೆ ಮಕ್ಕಳ ಭೇಟಿಯ ವಿಚಾರದಲ್ಲಿ ನ್ಯಾಯಾಲಯದ ಗಮನ ಸೆಳೆದಿತ್ತು.
ದೆಹಲಿ ನ್ಯಾಯಾಲಯವು ಧವನ್ ಅವರಿಗೆ ಭೇಟಿಯ ಹಕ್ಕು ನೀಡಿದರೂ, ಶಾಶ್ವತ ಪಾಲನೆ ಹಕ್ಕು ನೀಡಲಾಗಿರಲಿಲ್ಲ. ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ವಾಸಿಸುವ ಮಗನೊಂದಿಗೆ ವಿಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿರಲು ಅವಕಾಶ ನೀಡಲಾಗಿತ್ತು. ಆದರೆ ನಂತರ ವರ್ಚುವಲ್ ಸಂಪರ್ಕಕ್ಕೂ ಅಡ್ಡಿಯಾಗಿದೆ ಎಂದು ಧವನ್ ತಿಳಿಸಿದ್ದರು.
ಇದೀಗ ಸೋಫಿ ಶೈನ್ ಅವರೊಂದಿಗೆ ಹೊಸ ಜೀವನ ಆರಂಭಿಸಿರುವ ಶಿಖರ್ ಧವನ್, ವೈಯಕ್ತಿಕ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಕಾಮೆಂಟ್ರಿ ಕಾರ್ಯಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

