ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನನ್ನು ಆತನ ತಾಯಿಯ ಕಣ್ಣೆದುರೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು ನಗರದ ಥಣಿಸಂದ್ರ ವ್ಯಾಪ್ತಿಯ ಅಮರಜ್ಯೋತಿ ಲೇಔಟ್‌ನಲ್ಲಿ ಬುಧವಾರ ಸಂಜೆ ಈ ಭೀಕರ ಕೊಲೆ ನಡೆದಿದೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ ಪವನ್ ಕುಮಾರ್ (25) ಎಂಬ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ತಟ್ಟಿದ ಪ್ರತಿಭಟನೆ ಬಿಸಿ: ಸುಳ್ಳು ಹೇಳಿ ಬಿಜೆಪಿ ಕೈಗೆ ಅಸ್ತ್ರವಾದ್ರಾ ಸಿಎಂ ಸಿದ್ದರಾಮಯ್ಯ?
ಪ್ರತ್ಯಕ್ಷ ಸಾಕ್ಷಿಗಳ ಮಾಹಿತಿ ಪ್ರಕಾರ, ಮೂರು ಬೈಕ್‌ಗಳಲ್ಲಿ ಬಂದಿದ್ದ ಆರು ಮಂದಿ ಆರೋಪಿಗಳು ಹೆಲ್ಮಟ್ ಧರಿಸಿಕೊಂಡು ಪವನ್ ಕುಮಾರ್ ಮನೆ ಬಳಿ ದಾಳಿ ನಡೆಸಿದ್ದಾರೆ.
ಪವನ್ ಮನೆಗೆ ಬಂದು ನಿಂತ ಕ್ಷಣದಲ್ಲೇ, ಆತನ ಹೆತ್ತ ತಾಯಿಯ ಕಣ್ಣೆದುರಿನಲ್ಲೇ ಆರೋಪಿಗಳು ಅವನ ಮೇಲೆ ಮನಬಂದತೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹೆತ್ತ ಮಗನನ್ನು ರಕ್ಷಿಸಲು ಸಹಾಯಕ್ಕಾಗಿ ತಾಯಿ ಕೋಮಲ ಗೋಗರೆದ ದೃಶ್ಯ ಮನಕಲಕುವಂತಿತ್ತು.
ಹತ್ಯೆ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ.
ಪವನ್ ಕುಮಾರ್ ಹಿಂದೆ ಮರ್ಡರ್ ಪ್ರಕರಣವೊಂದರಲ್ಲಿ A5 ಆರೋಪಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದ. ಕಳೆದ ಮೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಗೊಂಡು ಮನೆಗೆ ಮರಳಿದ್ದನು. ಮಗ ಇನ್ನು ಕೆಟ್ಟ ಹಾದಿ ಹಿಡಿಯೋದು ಬೇಡ. ಒಳ್ಳೆಯವನಾಗಿ ಬದಲಾಗಲಿ ಎಂಬ ಕಾರಣಕ್ಕೆ ಒಂದೂವರೆ ತಿಂಗಳ ಹಿಂದಷ್ಟೇ ಮನೆ ಸಮೀಪವೇ ಕುಟುಂಬದವರು ಅವನಿಗೆ ಬೇಕರಿ ಹಾಕಿ ಕೊಟ್ಟಿದ್ದರು.
ಆದರೆ ಹಳೆಯ ವೈಷಮ್ಯಗಳು ಈ ಕೊಲೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. “ಪ್ರೇಮ್ ಎಂಬಾತ ನನ್ನನ್ನು ಹೊಡೆಸಲು ಯತ್ನಿಸುತ್ತಿದ್ದಾನೆ” ಎಂದು ಪವನ್ ಕುಮಾರ್ ಕೆಲವು ದಿನಗಳ ಹಿಂದೆ ತಾಯಿಯ ಬಳಿ ಆತಂಕ ವ್ಯಕ್ತಪಡಿಸಿದ್ದನಂತೆ.
ಇದೇ ವೈಷಮ್ಯವೇ ಕೊನೆಗೂ ಅವನ ಜೀವಕ್ಕೆ ಕುತ್ತು ತಂದಿದೆಯೇ ಎಂಬ ದಿಕ್ಕಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಗರದಲ್ಲಿ ಮತ್ತೆ ರೌಡಿಶೀಟರ್ ಹತ್ಯೆ ನಡೆದಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

