ಬೆಂಗಳೂರು: ಲಿವ್-ಇನ್ ಸಂಬಂಧ ಮುರಿದುಬಿದ್ದ ನಂತರ ತಂದೆ ಮಗುವನ್ನು ಕೈಬಿಟ್ಟ ಸಂದರ್ಭದಲ್ಲಿ, ಮಗುವಿನ ಜನನ ಪ್ರಮಾಣಪತ್ರದಲ್ಲಿ ತಾಯಿಯ ಕುಟುಂಬದ ಹೆಸರು (Maternal Surname) ಮತ್ತು ತಾಯಿಯ ಹೆಸರನ್ನು ಮಾತ್ರ ಸೇರಿಸಲು ಕರ್ನಾಟಕ ಉಚ್ಚ ನ್ಯಾಯಾಲಯವು ಅನುಮತಿ ನೀಡಿದೆ. ನೇಪಾಳ ಮೂಲದ ದಂಪತಿಗಳು ಬೆಂಗಳೂರಿನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದರು. ಅವರಿಗೆ 2017ರಲ್ಲಿ ಹೆಣ್ಣು ಮಗು ಜನಿಸಿತ್ತು. ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆ ಮತ್ತು ತಾಯಿ ಇಬ್ಬರ ಹೆಸರಿತ್ತು. ಆದರೆ ನಂತರ ಪ್ರಿಯಕರನು ಮಗು ಮತ್ತು ತಾಯಿಯನ್ನು ಬಿಟ್ಟು ನೇಪಾಳಕ್ಕೆ ತೆರಳಿ ಸಂಪರ್ಕ ಕಡಿದುಕೊಂಡಿದ್ದನು.
ಮಗುವನ್ನು ಒಬ್ಬಳೇ ಸಾಕುತ್ತಿದ್ದ ತಾಯಿಯು, ಜನನ ಪ್ರಮಾಣಪತ್ರದಿಂದ ತಂದೆಯ ಹೆಸರನ್ನು ತೆಗೆದುಹಾಕಿ ತನ್ನ ಕುಟುಂಬದ ಹೆಸರನ್ನು ಸೇರಿಸಲು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ಇದನ್ನು ನಿರಾಕರಿಸಿದ್ದರು.ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು, “ತಂದೆಯ ಹೆಸರನ್ನು ತೆಗೆದುಹಾಕುವುದರಿಂದ ಮಗುವಿನ ಕಾನೂನುಬದ್ಧ ಹಕ್ಕುಗಳಿಗೇನೂ ಧಕ್ಕೆಯಾಗುವುದಿಲ್ಲ. ಮಗುವಿನ ಹಿತದೃಷ್ಟಿಯಿಂದ ಮತ್ತು ಗೌರವಯುತ ಜೀವನಕ್ಕಾಗಿ ತಾಯಿಯ ಹೆಸರನ್ನು ಮಾತ್ರ ಉಳಿಸಿಕೊಳ್ಳುವ ಹಕ್ಕು ಅವರಿಗಿದೆ” ಎಂದು ಆದೇಶಿಸಿದರು.

ಇದನ್ನೂ ಓದಿ: ಕೊಡಗು: ಹಿಂದು ಕಾರ್ಯಕರ್ತನ ಮೇಲೆ ಹಲ್ಲೆ, ಬಿಜೆಪಿಯಿಂದ ಖಂಡನೆ
ತಂದೆ ಜವಾಬ್ದಾರಿಯಿಂದ ನುಣುಚಿಕೊಂಡಾಗ, ಮಗುವನ್ನು ಸಾಕಿ ಸಲಹುವ ತಾಯಿಯೇ ಮಗುವಿನ ಹೆಸರನ್ನು ನಿರ್ಧರಿಸುವ ಪೂರ್ಣ ಅಧಿಕಾರ ಹೊಂದಿರುತ್ತಾರೆ.ಹೆಸರಿನ ಬದಲಾವಣೆಯು ಕೇವಲ ಗುರುತಿಗಾಗಿ ಮಾತ್ರ. ಇದರಿಂದ ಮಗುವಿನ ಉತ್ತರಾಧಿಕಾರ ಅಥವಾ ಜೀವನಾಂಶದ ಹಕ್ಕುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇದು ಸಂವಿಧಾನದ 21ನೇ ವಿಧಿಯಡಿ (ಜೀವಿಸುವ ಹಕ್ಕು ಮತ್ತು ಘನತೆ) ಮಗುವಿನ ಗೌರವವನ್ನು ಎತ್ತಿಹಿಡಿಯುವ ನಿರ್ಧಾರವಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

