ಮಸ್ಕತ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಈಗ ಸಮುದ್ರ ಮಾರ್ಗಗಳಿಗೂ ಹರಡಿದೆ. ಓಮನ್ ಕರಾವಳಿಯ ಸಮೀಪ ಚಲಿಸುತ್ತಿದ್ದ ‘ಎಂಕೆಡಿ ವ್ಯೋಮ್’ (MKD Vyom) ಎಂಬ ತೈಲ ಟ್ಯಾಂಕರ್ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ಮೂಲದ ನಾವಿಕರೊಬ್ಬರು ಸಾವನ್ನಪ್ಪಿದ್ದಾರೆ. ಇದು ಪ್ರಸ್ತುತ ನಡೆಯುತ್ತಿರುವ ಯುದ್ಧದಲ್ಲಿ ಸಂಭವಿಸಿದ ಮೊದಲ ಭಾರತೀಯ ಸಾವು ಎಂದು ವರದಿಯಾಗಿದೆ. ಓಮನ್ ಕರಾವಳಿಯಿಂದ ಸುಮಾರು 52 ನಾಟಿಕಲ್ ಮೈಲಿ ದೂರದಲ್ಲಿರುವ ಓಮನ್ ಕೊಲ್ಲಿಯಲ್ಲಿ ಈ ಘಟನೆ ನಡೆದಿದೆ.
ಚಾಲಕ ರಹಿತ ಜಲಗಾಮಿ ನೌಕೆ (Unmanned Surface Vessel) ಅಥವಾ ಕ್ಷಿಪಣಿಯ ಮೂಲಕ ಹಡಗಿನ ಎಂಜಿನ್ ರೂಮ್ ಅನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಇದರಿಂದ ಹಡಗಿನಲ್ಲಿ ಸ್ಫೋಟ ಮತ್ತು ಬೆಂಕಿ ಕಾಣಿಸಿಕೊಂಡಿದೆ. ಈ ತೈಲ ಟ್ಯಾಂಕರ್‌ನಲ್ಲಿ ಒಟ್ಟು 21 ಸಿಬ್ಬಂದಿಗಳಿದ್ದರು. ಇವರಲ್ಲಿ 16 ಮಂದಿ ಭಾರತೀಯರು, 4 ಮಂದಿ ಬಾಂಗ್ಲಾದೇಶದವರು ಮತ್ತು ಒಬ್ಬರು ಉಕ್ರೇನ್ ಪ್ರಜೆ ಇದ್ದರು. ದಾಳಿಯ ನಂತರ ಓಮನ್ ಅಧಿಕಾರಿಗಳು ಉಳಿದ 20 ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.

ಇದನ್ನೂ ಓದಿ: ಅಬುಧಾಬಿಯಿಂದ ದೆಹಲಿಗೆ ಬಂದಿಳಿದ ಮೊದಲ ವಿಮಾನ; ದುಬೈನಲ್ಲಿ ಸಿಲುಕಿದವರಿಗೆ ಬಿಡುಗಡೆ ಭಾಗ್ಯ!
ಓಮನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ನಾವಿಕನ ಸಾವಿಗೆ ತೀವ್ರ ಸಂತಾಪ ಸೂಚಿಸಿದೆ. ಮೃತರ ಪಾರ್ಥಿವ ಶರೀರವನ್ನು ಶೀಘ್ರವೇ ಭಾರತಕ್ಕೆ ತರಲು ಓಮನ್ ಸರ್ಕಾರದೊಂದಿಗೆ ಸಮನ್ವಯ ನಡೆಸಲಾಗುತ್ತಿದೆ ಎಂದು ತಿಳಿಸಿದೆ.ಇದಕ್ಕೂ ಒಂದು ದಿನ ಮೊದಲು, ಹಾರ್ಮುಜ್ ಜಲಸಂಧಿಯಲ್ಲಿ ‘ಎಂವಿ ಸ್ಕೈಲೈಟ್’ (MV Skylight) ಎಂಬ ಮತ್ತೊಂದು ಹಡಗಿನ ಮೇಲೆ ದಾಳಿ ನಡೆದಿತ್ತು. ಅದರಲ್ಲಿ 15 ಭಾರತೀಯ ಸಿಬ್ಬಂದಿಗಳಿದ್ದು, ನಾಲ್ವರು ಗಾಯಗೊಂಡಿದ್ದರು. ಈ ಸರಣಿ ದಾಳಿಗಳು ಸಮುದ್ರ ಮಾರ್ಗದ ಮೂಲಕ ನಡೆಯುವ ವ್ಯಾಪಾರ ಮತ್ತು ನಾವಿಕರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿವೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

